ಕಾಳಗಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ

ಕಾಳಗಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬಿತ್ತನೆಗೆ ಅಗತ್ಯ ದಾಸ್ತಾನು ಲಭ್ಯವಿದೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕಾರ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಕಾಳಗಿ, ಕೋಡ್ಲಿ ಹಾಗೂ ಮಾಡಬೂಳ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರಿಗೆ ಅಗತ್ಯವಿರುವ ಸೋಯಾ, ತೊಗರಿ, ಹೆಸರು ಮತ್ತು ಉದ್ದು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ರಿಯಾಯಿತಿ ದರದಲ್ಲಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸೋಯಾ ಬಿತ್ತನೆ ಮಾಡುವ ರೈತರು ಅವಸರಪಡದೇ ಉತ್ತಮ ಮಳೆಯಾದ ಬಳಿಕವೇ ಬಿತ್ತನೆ ಕೈಗೊಳ್ಳಬೇಕು. ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ಸಂಯುಕ್ತ ಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.
ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡುವವರ ವಿರುದ್ಧ ಲಿಖಿತ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಕೃಷಿ ಅಧಿಕಾರಿ ರಾಹುಲ್ ಚವ್ಹಾಣ ಮಾತನಾಡಿ, ಕಾಳಗಿ ಕೃಷಿ ಕಚೇರಿಯಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ಜುಲೈ ಕೊನೆಯವರೆಗೂ ಬಿತ್ತನೆ ಮಾಡಲು ಅವಕಾಶವಿದೆ. ಮಳೆಯಿಂದ ಭೂಮಿ ಸಂಪೂರ್ಣ ಹದವಾದ ಬಳಿಕವೇ ಬಿತ್ತನೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ಅಧ್ಯಕ್ಷರು ಶರಣಗೌಡ ಪೊಲೀಸ್ ಪಾಟೀಲ, ಉಪಾಧ್ಯಕ್ಷ ಪ್ರಭು ಬಾವಿ, ವಿಜಯಕುಮಾರ್ ತುಪ್ಪದ ತೆಂಗಳಿ, ಶಿವಶರಣಪ್ಪ ಕಮಲಾಪೂರ, ಕೃಷಿ ಅಧಿಕಾರಿ ರಾಹುಲ್ ಚವ್ಹಾಣ, ಸಹಾಯಕ ಕೃಷಿ ಅಧಿಕಾರಿ ಸರೋಜ ಕಲಬುರಗಿ, ಲೆಕ್ಕಾಧಿಕಾರಿ ಶರಣು ಪೂಜಾರಿ, ಸಿಬ್ಬಂದಿ ಅನಿತಾ ಹವಳಗಿ, ಅಮರನಾಥ ಸೂರ್ಯವಂಶಿ, ಜಾವೀದ ಟೆಂಗಳಿ, ರೈತ ದೇವಿಂದ್ರ ಪೂಜಾರಿ, ನಾಗರಾಜ ಕೊಡದೂರ, ರಂಜೀತ ಭೆಡಸೂರ, ಕಮಲಾಬಾಯಿ, ಗೇಣಿಬಾಯಿ ಸೇರಿದಂತೆ ಅನೇಕರು ಇದ್ದರು.






