ಅಫಜಲಪುರದಲ್ಲಿ ತಳವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ವಿತರಣೆ
ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳಿಗೆ ಶಾಸಕ ಎಂ.ವೈ.ಪಾಟೀಲ್ ಸೂಚನೆ

ಅಫಜಲಪುರ: ಎರಡು ವರ್ಷಗಳಿಂದ ಎಸ್‌ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ತಳವಾರ ಸಮಾಜಕ್ಕೆ ಕೊನೆಗೂ ಫಲ ದೊರೆತಿದ್ದು, ಅಫಜಲಪುರ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಬುಧವಾರ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ನೈಜ ತಳವಾರ ಸಮುದಾಯದ ಅರ್ಹರಿಗೆ ಯಾವುದೇ ಅನ್ಯಾಯವಾಗದಂತೆ ಪಾರದರ್ಶಕವಾಗಿ ಎಸ್‌ಟಿ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರೇಡ್–2 ತಹಶೀಲ್ದಾರ್ ರಾಜಶೇಖರ ಬಂಡೆ ಮಾತನಾಡಿ, ಸರ್ಕಾರದ ನಿಯಮಗಳು ಹಾಗೂ ಮೇಲಧಿಕಾರಿಗಳ ನಿರ್ದೇಶನದಂತೆ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ತಳವಾರ ಸಮಾಜದ ಮುಖಂಡರು ಸರ್ಕಾರ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಪಾರದರ್ಶಕ ಪರಿಶೀಲನೆ ಮುಂದುವರಿಸಿ ನೈಜ ಫಲಾನುಭವಿಗಳಿಗೆ ನಿರಂತರವಾಗಿ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಡಿವೈಎಸ್‌ಪಿ ತಮ್ಮರಾಯ, ಗ್ರೇಡ್–2 ತಹಶೀಲ್ದಾರ್ ರಾಜಶೇಖರ ಬಂಡೆ, ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷ ಚಂದ್ರಕಾಂತ ದಶರಥ ತಳವಾರ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ, ಮುಖಂಡ ರಾಜಕುಮಾರ ಉಕ್ಕಲಿ, ಸಿದ್ದಾರಾಮ ಚಿಕ್ಕವಲಗಿ, ಪ್ರವೀಣ ತೆಗ್ಗೆಳ್ಳಿ, ಯಲ್ಲಪ್ಪ ತಳವಾರ, ಬಸವರಾಜ ತಳವಾರ, ಭೀಮಾಶಂಕರ ನಾಗಬಾರ, ಜೆಟ್ಟೇಪ್ಪ ಶಾಖಾಪೂರ, ಸುನೀಲ ನೈಕೋಡಿ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.






