ಕಲಬುರಗಿಯಲ್ಲಿ ಯುವಕರ ಕೋಕೋಪೀಟ್ ಉತ್ಪಾದನೆಗೆ ಜಿಲ್ಲಾಡಳಿತ ಮೆಚ್ಚುಗೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೃಷಿ ಆಧಾರಿತ ಉದ್ಯಮಶೀಲತೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ಕಲಬುರಗಿಯಲ್ಲಿ ಯುವ ಉದ್ಯಮಿಗಳು ಸ್ಥಾಪಿಸಿರುವ ಕೋಕೋಪೀಟ್ ಉತ್ಪಾದನಾ ಘಟಕ ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾಗಿದೆ.
ನಿರ್ಗಮಿತ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕದ ಕಾರ್ಯವಿಧಾನವನ್ನು ಅವಲೋಕಿಸಿದ ಅವರು ಯುವಕರ ಹೊಸ ಆಲೋಚನೆ ಮತ್ತು ಉದ್ಯಮಶೀಲತೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಯುವಕರು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಇಂತಹ ಪ್ರಯತ್ನಗಳು ಸ್ಥಳೀಯ ಆರ್ಥಿಕಾಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಈ ಕೋಕೋಪೀಟ್ ಉತ್ಪಾದನಾ ಘಟಕವನ್ನು ಇಗಲ ಎಕ್ಸಿಮ್ ಸಂಸ್ಥೆಯ ರಮೇಶ್ ಸ್ವಾಮಿ ಮುನ್ನಡೆಸುತ್ತಿದ್ದು, ನಿಸರ್ಗ ರೂಟ್ಸ್ ಮೂಲಕ ಜಗದೀಶ ಗಾಜರೆ ಹಾಗೂ ರಮೇಶ್ ಕಡಗಂಚಿ ಅವರು ಅಷ್ಟಮ ಟ್ರೇಡಿಂಗ್, ಪುಣೆ ಸಹಯೋಗದಲ್ಲಿ ರಫ್ತು ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ಪಾದನೆಯಾದ ಉತ್ತಮ ಗುಣಮಟ್ಟದ ಕೋಕೋಪೀಟ್ ಅನ್ನು ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್, ಮಧ್ಯಪ್ರಾಚ್ಯ ಹಾಗೂ ನೆದರ್‌ಲ್ಯಾಂಡ್ಸ್ ದೇಶಗಳಿಗೆ ರಫ್ತು ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಯುವಕರು ಕೃಷಿ ಆಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕೃಷಿ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ‘ಕಲಬುರಗಿ ರೊಟ್ಟಿ ಯೋಜನೆ’ ಯಶಸ್ವಿ ಉದಾಹರಣೆ ಎಂದು ಹೇಳಿದರು.
ಸಾಮಾನ್ಯವಾಗಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುವ ಕೋಕೋಪೀಟ್ ಉದ್ಯಮವನ್ನು ಕಲಬುರಗಿಯ ಯುವಕರು ಹೊಸ ಆಲೋಚನೆಯೊಂದಿಗೆ ಆರಂಭಿಸಿರುವುದು ಗಮನಾರ್ಹವಾಗಿದೆ. ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ “ಕಸದಿಂದ ರಸ” ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವುದು ವಿಶೇಷವಾಗಿದೆ.






