ಡಾ.ಅಪ್ಪಾಜಿಯವರ ಶಿಕ್ಷಣ ಸೇವೆ ಸದಾ ಸ್ಮರಣೀಯ: ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಬುಧವಾರ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕ್ರಮದಲ್ಲಿ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಶಿಕ್ಷಣ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯ ಅಪ್ಪಾಜಿಯವರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರು, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ರಚಿಸಿರುವ ‘ಮಹಾಮಾನವ’ ಭಾಗ-1, ಡಾ. ಎನ್.ಎಸ್. ಪಾಟೀಲ ರಚಿಸಿರುವ ಡಾ. ಅಪ್ಪಾಜಿಯವರ ಜೀವನ ಚರಿತ್ರೆ ‘ದಾಸೋಹಮೂರ್ತಿ ವಿದ್ಯಾಭಂಡಾರಿ’ ಹಾಗೂ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಕಾಶ ನೆಲ್ಲಗಿ ಸಿದ್ಧಪಡಿಸಿರುವ ಡಾ. ಅಪ್ಪಾಜಿಯವರು ಪ್ರತಿಪಾದಿಸಿದ 16 ದಾಸೋಹ ಸೂತ್ರಗಳನ್ನು ಪರಿಚಯಿಸುವ ವಿಡಿಯೋಗಳ ಸಮೂಹವನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರು, ಡಾ. ಶರಣಬಸವಪ್ಪ ಅಪ್ಪಾಜಿಯವರು ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಐತಿಹಾಸಿಕ ಹಾಗೂ ಅಪೂರ್ವವಾದದ್ದು ಎಂದು ಬಣ್ಣಿಸಿದರು.
ಹಿಂದುಳಿದ ಪ್ರದೇಶದ ಶೈಕ್ಷಣಿಕ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಾಜಿಯವರು ಕಲಬುರಗಿಯನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸುವುದರ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಅವರ ಕೊಡುಗೆಗೆ ಸರಿಸಾಟಿಯಿಲ್ಲ ಎಂದು ಹೇಳಿದರು.
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಮಾತನಾಡಿ, ತಮ್ಮ ತಂದೆ ಡಾ. ಶರಣಬಸವಪ್ಪ ಅಪ್ಪಾಜಿಯವರೊಂದಿಗಿನ ಆತ್ಮೀಯ ಬಾಂಧವ್ಯ ಹಾಗೂ ಪ್ರತಿದಿನ ಹಂಚಿಕೊಂಡ ಪ್ರೀತಿ, ಸಂತೋಷದ ಕ್ಷಣಗಳನ್ನು ಭಾವುಕರಾಗಿ ಸ್ಮರಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಮಾತನಾಡಿ, ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಸಮಾಜದ ಎಲ್ಲ ವರ್ಗಗಳ ಜನರು ಪಾಲ್ಗೊಂಡಿರುವುದು ಅವರ ಮೇಲಿನ ಜನರ ಅಪಾರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಸಾಮಾನ್ಯ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ. ಅಪ್ಪಾಜಿಯವರು ಸಲ್ಲಿಸಿರುವ ಕೊಡುಗೆಯನ್ನು ಸಮಾಜ ಸದಾ ಸ್ಮರಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ವಚನ ಟಿವಿ ವತಿಯಿಂದ ನೀಡಲಾಗುವ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು.
ಹಾರಕೂಡ ಸಂಸ್ಥಾನ ಮಠದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು ಮಾತನಾಡಿ, ತಮ್ಮ ಜೀವನದುದ್ದಕ್ಕೂ ಶರಣಬಸವೇಶ್ವರ ಸಂಸ್ಥಾನ ಹಾಗೂ ಪೂಜ್ಯ ಡಾ. ಅಪ್ಪಾಜಿಯವರೊಂದಿಗೆ ಹೊಂದಿದ್ದ ಆತ್ಮೀಯ ಒಡನಾಟವನ್ನು ಸ್ಮರಿಸಿದರು.
9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕೇವಲ 6ನೇ ವಯಸ್ಸಿನಲ್ಲಿಯೇ ಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾಗಿದ್ದರು ಎಂದು ಸ್ಮರಿಸಿದ ಅವರು, ತಾವೂ 6ನೇ ವಯಸ್ಸಿನಲ್ಲಿಯೇ ಹಾರಕೂಡ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾಗಿದ್ದಾಗಿ ತಿಳಿಸಿದರು.
ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಸಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲಬುರಗಿ ಲೋಕಸಭಾ ಸದಸ್ಯ ಡಾ. ರಾಧಾಕೃಷ್ಣ ದೊಡ್ಡಮನಿ, ಮುತ್ತ್ಯಾನ ಬಬಲಾದ ಮಠದ ಪೀಠಾಧಿಪತಿ ಡಾ. ಗುರುಪಾದಲಿಂಗ ಮಹಾಶಿವಯೋಗಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಅಪ್ಪಾಜಿಯವರ ಪುತ್ರಿಯರಾದ ಕುಮಾರಿ ಭವಾನಿ, ಕುಮಾರಿ ಶಿವಾನಿ, ಕುಮಾರಿ ಮಹೇಶ್ವರಿ, ಡಾ. ಗಂಗಾಂಬಿಕಾ ನಿಷ್ಠಿ, ಉಮಾ ಕಾಡಾದಿ, ಡಾ. ಶಾಂತಲಾ ನಿಷ್ಠಿ, ಗೋದಾವರಿ ಭೀಮಳ್ಳಿ, ಡಾ. ವೀರನಾಥ ಮಹಾರಾಜ (ಔಸಾ), ಶ್ರೀ ಆದಿನಾಥ ಮಹಾರಾಜ, ಡಾ. ಅಲ್ಲಮಪ್ರಭು ದೇಶಮುಖ, ವಿಜಯಲಕ್ಷ್ಮೀ ಮುದಗಲ್, ಚಂದ್ರಶೇಖರ ನರಕೆ ಸೇರಿದಂತೆ ಕುಟುಂಬದ ನಿಕಟ ಸದಸ್ಯರನ್ನು ಸನ್ಮಾನಿಸಲಾಯಿತು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಬಿ.ಆರ್. ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ. ಪಾಟೀಲ, ಶಶೀಲ ನಮೋಶಿ, ಜಗದೇವ ಗುತ್ತೇದಾರ ಹಾಗೂ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ನರಿಬೋಳ, ಮಾಜಿ ಸಂಸದ ಉಮೇಶ ಜಾಧವ್ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.






