ಕಲಬುರಗಿ | ಯುವ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಡಾ.ಜಗನ್ನಾಥ ತರನಳ್ಳಿ ಆಯ್ಕೆ

ಜಗನ್ನಾಥ್ ತರನಳ್ಳಿ, ವಿಜಯಕುಮಾರ್ ತೇಗಲತಿಪ್ಪಿ
ಕಲಬುರಗಿ: ವರ್ತಮಾನದ ಸಾಹಿತ್ಯ ಕುರಿತು ಚರ್ಚೆ ಮತ್ತು ಚಿಂತನೆ ಮಾಡುವ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜುಲೈ ಮಾಸಾಂತ್ಯಕ್ಕೆ ಹಮ್ಮಿಕೊಳ್ಳಲುದ್ದೇಶಿಸಿರುವ ಕಲಬುರಗಿ ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸೇಡಂ ನ ಬರಹಗಾರ - ಸಾಹಿತಿ-ಪತ್ರಕರ್ತ ಡಾ.ಜಗನ್ನಾಥ ಎಲ್ ತರನಳ್ಳಿ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಇಂದಿನ ಯುವ ಬರಹಗಾರರಿಗೆ ಪ್ರೋತ್ಸಾಹಿಸಲು ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಈ ಸಮ್ಮೇಳನ ಪೂರಕವಾಗಲಿದೆ. ಕಳೆದ ಮೂರು ವರ್ಷಗಳಿಂದ ವಿಭಿನ್ನ ಹಾಗೂ ಪ್ರಪ್ರಥಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಹೊಸ ಪರಂಪರೆಯೊಂದನ್ನು ಸಾಹಿತ್ಯ ಲೋಕದಲ್ಲಿ ಹುಟ್ಟು ಹಾಕುವಂತಾಗಿದೆ.
ಜಿಲ್ಲೆಯಲ್ಲಿ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಸಾಧನೆಗೈದ ಅದೇಷ್ಟೋ ಪ್ರತಿಭೆಗಳು ತೆರೆಮರೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಸಾಹಿತಿ ಡಾ.ಜಗನ್ನಾಥ ತರನಳ್ಳಿ ಅವರು ಒಬ್ಬರಾಗಿದ್ದಾರೆ. ಹಾಗಾಗಿ ಇಂಥ ಯುವ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಮೂಲಕ ನಾಡಿನ ಅನೇಕ ಕವಿ-ಕಲಾವಿದ, ಸಾಹಿತಿಗಳನ್ನು ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ವಿವರಿಸಿದರು.
ಯುವ ಸಮುದಾಯದ ಸಾಮಾಜಿಕ ಬದುಕಿನ ಸ್ಥಿತ್ಯಂತರ ಹಾಗೂ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಈ ಸಮ್ಮೇಳನ ಉತ್ತಮ ಬೆಳಕು ಚೆಲ್ಲಲಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸಿದ್ಧತೆಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖ ಪದಾಧಿಕಾರಿಗಳಾದ ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ಸಿದ್ಧಲಿಂಗ ಬಾಳಿ, ಶಿವಾನಂದ ಪೂಜಾರಿ, ರಮೇಶ ಬಡಿಗೇರ, ಧರ್ಮರಾಜ ಜವಳಿ, ಡಾ.ರೆಹಮಾನ್ ಪಟೇಲ, ಜಗದೀಶ ಮರಪಳ್ಳಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಸೈಯದ್ ನಜಿರುದ್ದೀನ್ ಮುತ್ತವಲಿ, ಬಾಬುರಾವ ಪಾಟೀಲ ಸೇರಿದಂತೆ ಅನೇಕರು ತೊಡಗಿಸಿಕೊಂಡಿದ್ದಾರೆ.







