ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಮನಬಂದಂತೆ ಮಾತನಾಡುವುದು ಸರಿಯಲ್ಲ : ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ : “ಮಲ್ಲಿಕಾರ್ಜುನ ಖರ್ಗೆ ಅವರು ಘನತೆ, ಗೌರವ ಹಾಗೂ ಸಮಾಜ ನಿರ್ಮಾಣದ ಕೆಲಸಗಳನ್ನು ಮಾಡಿದ್ದಾರೆ. ಕೆಲ ಬಿಜೆಪಿ ನಾಯಕರು ಮನಬಂದಂತೆ ಮಾತನಾಡುವುದು ಸರಿಯಲ್ಲ” ಎಂದು ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ.
ಗುರುವಾರ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ಅವರು ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಅಸ್ಸಾಂನಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು “ವಿಷ ಸರ್ಪ” ಎಂದು ಹೇಳಿದ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡಿರುವುದು ಅಸಂಬದ್ಧ ಎಂದು ಅವರು ಅಭಿಪ್ರಾಯಪಟ್ಟರು. “ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕರನ್ನು ಅರ್ಬನ್ ನಕ್ಸಲ್ ಎಂದು ಕರೆದು, ಸೋನಿಯಾ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ಹಲವರ ಬಗ್ಗೆ ಟೀಕೆ ಮಾಡಿದ್ದಾರೆ. ಈಗ ಖರ್ಗೆ ಅವರ ಹೇಳಿಕೆಯನ್ನು ದೊಡ್ಡ ವಿಷಯ ಮಾಡುವುದು ಸರಿಯಲ್ಲ,” ಎಂದು ಹೇಳಿದರು.
ಇದೇ ವೇಳೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಟೀಕಿಸಿ, “ಅಮಿತ್ ಷಾ ಅವರು ನೆಹರು ಅವರನ್ನು ಅನೇಕ ಬಾರಿ ಟೀಕಿಸಿದ್ದಾರೆ. ನೆಹರು ಅವರ ಸರಿಸಾಟಿ ಇದ್ದಾರಾ? ಇಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿರುವವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಕಡಿಮೆ ಎಂದು ಆರೋಪಿಸಿದ ಅವರು, “ನಾವು ಹೇಟ್ ಸ್ಪೀಚ್ ಮಾಡಿಲ್ಲ. ನಮ್ಮ ಕೆಲಸದ ಬಗ್ಗೆ ಟೀಕೆ ಮಾಡಲಿ, ವೈಯಕ್ತಿಕ ಟೀಕೆ ಬೇಡ” ಎಂದು ಹೇಳಿದರು.
ನೆಹರೂ, ವಲ್ಲಭ ಭಾಯಿ ಪಟೇಲ್ ಸೇರಿದಂತೆ ಅನೇಕ ನಾಯಕರು ಮೈತ್ರಿ ರಹಿತ ನೀತಿಯನ್ನು ಮುನ್ನಡೆಸಿಕೊಂಡು ಬಂದವರು. ಯಾವುದೋ ಒಂದು ದೇಶ ಇನ್ನೊಂದು ದೇಶದ ವಿರುದ್ಧ ದಾಳಿ ನಡೆಸಿದರೆ ಖಂಡಿಸುತ್ತಿದ್ದರು. ಯುದ್ಧಕ್ಕೆ ಬೆಂಬಲಿಸುತ್ತಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ಒಂದೇ ಸೈಡ್ ತಗೊಂಡಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಿದಾಗ ಇಸ್ರೇಲ್ ಗೆ ಯಾಕೆ ಹೋಗಬೇಕಿತ್ತು? ಎಂದು ಪ್ರಶ್ನಿಸಿದ ಅವರು, ಈ ರೀತಿಯ ತಪ್ಪು ವಿದೇಶಾಂಗ ನೀತಿಯಿಂದಾಗಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಉಂಟಾಗಿವೆ ಎಂದರು.
ಎರಡು ಮೆಡಿಕಲ್ ಕಾಲೇಜುಗಳು:
ಬಾಗಲಕೋಟೆ ಹಾಗೂ ರಾಮನಗರಕ್ಕೆ ಎರಡು ಹೊಸ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿದ ಅವರು, “450 ಯುಜಿ ಹಾಗೂ ಪಿಜಿ ಸೀಟ್ಗಳಿಗೆ ಮನವಿ ಮಾಡಿದ್ದೇವೆ. ಈ ಶೈಕ್ಷಣಿಕ ವರ್ಷದಲ್ಲೇ ಆರಂಭವಾಗುವ ನಿರೀಕ್ಷೆಯಿದೆ,” ಎಂದರು.







