ದುಬೈನಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ಡಾ. ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳ ಸ್ಮರಣಾರ್ಥ ಪ್ರಶಸ್ತಿ ಪ್ರದಾನ

ಕಲಬುರಗಿ: ದುಬೈನಲ್ಲಿ ಶನಿವಾರದಂದು ನಡೆದ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ವಚನ ಟಿವಿ ವತಿಯಿಂದ ಗದಗಿನ ಡಾ.ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳ ಸ್ಮರಣಾರ್ಥ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದುಬೈನ ಮಿಲ್ಲೇನಿಯಂ ಪ್ಲಾಝಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ)ನ ಮಾಜಿ ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್ ಮತ್ತು ಸಾಣಿಹಳ್ಳಿ ಶ್ರೀ ಪಂಡಿತರಾಧ್ಯ ಸ್ವಾಮಿಗಳು, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹಾಗೂ ಇತರ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯೊಂದಿಗೆ ನಗದು ಬಹುಮಾನ, ಫಲಕ ಹಾಗೂ ಪ್ರಶಂಸಾ ಪ್ರಮಾಣಪತ್ರ ನೀಡಿ, ಶಾಲು ಹೋದಿಸಿ ಡಾ. ಅವ್ವಾಜಿಯವರಿಗೆ ಸನ್ಮಾನಿಸಿದರು.
ಡಾ. ಅವ್ವಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ, ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಡಾ. ಎ. ಎಸ್. ಕಿರಣ್‍ಕುಮಾರ್, ವಿಶ್ವವು ತಾಂತ್ರಿಕ ನಾವೀನ್ಯತೆಯ ಯುಗದಿಂದ ಪ್ರಾಬಲ್ಯ ಹೊಂದಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಆಗುತ್ತಿರುವ ಪ್ರಗತಿಗಳು ಆಶ್ಚರ್ಯಕಾರಿಯಾದರೂ, ಅದರ ಹಿಂದೆ ಇರುವ ರಹಸ್ಯವು ಮಾನವ ಮೆದುಳಿನ ಅದ್ಭುತ ಬುದ್ಧಿವಂತಿಕೆಯಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದ ಗಣ್ಯರಲ್ಲಿ, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ, ಜಗದ್ಗುರು ಮಾತೆ ಗಂಗಾದೇವಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಸಮಾರಂಭದ ಆರಂಭದಲ್ಲಿ ಕು. ಭವಾನಿ ಎಸ್. ಅಪ್ಪ, ಕು. ಶಿವಾನಿ ಎಸ್. ಅಪ್ಪ ಮತ್ತು ಕುಮಾರಿ ಮಹೇಶ್ವರಿ ಎಸ್. ಅಪ್ಪ ಅವರು ಭಾವಪೂರ್ಣ ವಚನಗಳನ್ನು ಪಠಿಸಿದರು.
ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ಗದಗನ ತೋಂಟದಾರ್ಯ ಸ್ವಾಮಿಗಳ ಸ್ಮರಣಾರ್ಥ ಪ್ರಶಸ್ತಿ ನೀಡಲಾಗಿದ್ದು, ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು. ವಿಜಯಲಕ್ಷ್ಮಿ ಮತ್ತು ಗುರುನಾಥ್ ಗಡ್ಡಿ ಅವರಿಗೆ ಡಾ. ಫ. ಗು. ಹಳಕಟ್ಟಿ ಪ್ರಶಸ್ತಿ, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜಗದ್ಗುರು ಲಿಂಗಾನಂದ ಶ್ರೀಗಳ ಪ್ರಶಸ್ತಿ ಮತ್ತು ಜಗದ್ಗುರು ಮಾತೆ ಗಂಗಾದೇವಿಯವರಿಗೆ ಇಳಕಲನ ಶ್ರೀ ಮಹಾಂತ ಅಪ್ಪುಗಳ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು. ಪ್ರೊ. ಎಸ್. ಜಿ. ಸಿದ್ದರಾಮಯ್ಯನವರು ತರಳಬಾಳು ಜಗದ್ಗುರು ಶಿವಕುಮಾರ್ ಶ್ರೀಗಳ ಹೆಸರಿನ ಪ್ರಶಸ್ತಿ ಹಾಗೂ ಐ. ಆರ್. ಮಠಪತಿಯವರು ಭಾಲ್ಕಿಯ ಡಾ. ಚನ್ನಬಸವ ಪಟ್ಟೇದೇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವೆ, ಎಂಎಲ್‍ಸಿ, ನಟಿ ಉಮಾಶ್ರೀ, ನಟಿ ಸುಧಾರಾಣಿ, ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಎಸ್. ಎಂ. ಸುರೇಶ್, ನಿರ್ದೇಶಕ ಸುದೇಶ್ ರಾವ್ ಮತ್ತು ಪ್ರೊ. ಸಿದ್ದು ಯಾಪಲಪರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







