ಕಲಬುರಗಿ ಜಿಲ್ಲೆಯಲ್ಲಿ 18.49 ಲಕ್ಷ ಮತದಾರರ ಕರಡು ಪಟ್ಟಿ ಪ್ರಕಟ; ಸೆ.23ರವರೆಗೆ ಹಕ್ಕು–ಆಕ್ಷೇಪಣೆಗೆ ಅವಕಾಶ
1.05 ಲಕ್ಷ ಅನ್ ಮ್ಯಾಪಿಂಗ್, 5.21 ಲಕ್ಷ ಮತದಾರರು ASDD ಪಟ್ಟಿಯಲ್ಲಿ

ಕಲಬುರಗಿ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR)-2026ರ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 18,49,585 ಮತದಾರರು ಪಟ್ಟಿಯಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಈ ಅವಧಿಯಲ್ಲಿ ಅರ್ಹ ಮತದಾರರು ತಮ್ಮ ಹೆಸರು, ವಿಳಾಸ, ವಯಸ್ಸು, ಮತಗಟ್ಟೆ ಸೇರಿದಂತೆ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಬೇಕು. ಹೆಸರು ಸೇರ್ಪಡೆಯಾಗದಿದ್ದರೆ ಅಥವಾ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದರು.
ಕರಡು ಪಟ್ಟಿಯಲ್ಲಿ 9,40,251 ಪುರುಷರು, 9,09,121 ಮಹಿಳೆಯರು ಹಾಗೂ 213 ತೃತೀಯ ಲಿಂಗದ ಮತದಾರರು ಇದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 2,29,997 ಮತದಾರರಿದ್ದು, ಕಲಬುರಗಿ ಗ್ರಾಮೀಣದಲ್ಲಿ 2,21,513, ಜೇವರ್ಗಿಯಲ್ಲಿ 2,15,846, ಆಳಂದದಲ್ಲಿ 2,05,852 ಹಾಗೂ ಅಫಜಲಪುರದಲ್ಲಿ 2,04,401 ಮತದಾರರಿದ್ದಾರೆ.
5.21 ಲಕ್ಷ ಮತದಾರರು ASDD ಪಟ್ಟಿಯಲ್ಲಿ :
SIR ಪ್ರಕ್ರಿಯೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 5,21,957 ಮತದಾರರನ್ನು ASDD (ಗೈರು, ಸ್ಥಳಾಂತರಗೊಂಡ, ಮೃತ, ನಕಲಿ/ಈಗಾಗಲೇ ನೋಂದಣಿಯಾಗಿರುವ ಹಾಗೂ ಇತರೆ) ವರ್ಗದಲ್ಲಿ ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಪೈಕಿ ಶೇ.22.01ರಷ್ಟಾಗಿದೆ.
ಕಲಬುರಗಿ ಉತ್ತರ ಕ್ಷೇತ್ರದಲ್ಲಿ 1,05,257 ಹಾಗೂ ಕಲಬುರಗಿ ದಕ್ಷಿಣದಲ್ಲಿ 1,01,263 ಮತದಾರರು ASDD ಪಟ್ಟಿಯಲ್ಲಿದ್ದಾರೆ. ಚಿತ್ತಾಪುರದಲ್ಲಿ 55,500, ಕಲಬುರಗಿ ಗ್ರಾಮೀಣದಲ್ಲಿ 53,365, ಆಳಂದದಲ್ಲಿ 49,214, ಜೇವರ್ಗಿಯಲ್ಲಿ 43,215, ಸೇಡಂನಲ್ಲಿ 41,491, ಅಫಜಲಪುರದಲ್ಲಿ 38,925 ಹಾಗೂ ಚಿಂಚೋಳಿಯಲ್ಲಿ 33,727 ಮತದಾರರನ್ನು ಈ ವರ್ಗದಲ್ಲಿ ಗುರುತಿಸಲಾಗಿದೆ.
ASDD ಪಟ್ಟಿಯಲ್ಲಿ 3,47,606 ಮಂದಿ ಗೈರು, 71,691 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 33,399 ಮಂದಿ ಮೃತರು ಹಾಗೂ 21,816 ಮಂದಿ ಈಗಾಗಲೇ ನೋಂದಣಿಯಾಗಿರುವ ಅಥವಾ ನಕಲಿ ನೋಂದಣಿ ಸೇರಿದಂತೆ ಇತರೆ ವರ್ಗಗಳಲ್ಲಿ ಗುರುತಿಸಲಾಗಿದೆ.
1.05 ಲಕ್ಷ ಮ್ಯಾಪಿಂಗ್, ಅಸಂಗತತೆ ಪ್ರಕರಣ :
SIR ಕರಡು ಪಟ್ಟಿಯಲ್ಲಿ ಒಟ್ಟು 1,05,493 ಮ್ಯಾಪಿಂಗ್ ಇಲ್ಲದ ಅಥವಾ ಅಸಂಗತತೆ ಇರುವ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 53,788 ಪ್ರಕರಣಗಳಲ್ಲಿ ಮ್ಯಾಪಿಂಗ್ ಇಲ್ಲದಿರುವುದು ಹಾಗೂ 51,705 ಪ್ರಕರಣಗಳಲ್ಲಿ ಅಸಂಗತತೆ ಕಂಡುಬಂದಿದೆ. ಕಲಬುರಗಿ ದಕ್ಷಿಣದಲ್ಲಿ 31,081 ಹಾಗೂ ಕಲಬುರಗಿ ಉತ್ತರದಲ್ಲಿ 25,866 ಪ್ರಕರಣಗಳು ದಾಖಲಾಗಿವೆ.
ಅ.27ರಂದು ಅಂತಿಮ ಮತದಾರರ ಪಟ್ಟಿ :
SIR ಪರಿಷ್ಕರಣೆಯ ವೇಳಾಪಟ್ಟಿಯಂತೆ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶವಿದ್ದು, ನೋಟಿಸ್ ಹಂತ ಹಾಗೂ ಹಕ್ಕು–ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅ.27, 2026ರಂದು ಪ್ರಕಟವಾಗಲಿದೆ.
ನೋಟಿಸ್ ನೀಡುವ ಸಂದರ್ಭದಲ್ಲಿ ಕಾರಣ, ಅಗತ್ಯ ದಾಖಲೆಗಳು, ವಿಚಾರಣೆಯ ದಿನಾಂಕ, ಸ್ಥಳ ಹಾಗೂ ಸಮಯವನ್ನು ನಮೂದಿಸಲಾಗಿರುತ್ತದೆ. ಬಿಎಲ್‌ಒಗಳು ನೋಟಿಸ್ ಅನ್ನು ಮತದಾರರ ಮನೆಗೆ ತೆರಳಿ ನೀಡಲಿದ್ದಾರೆ. ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ಅವರು ಸೂಚಿಸುವ ವ್ಯಕ್ತಿಗೆ ನೋಟಿಸ್ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೋಟಿಸ್ ನೀಡಿದ ಬಳಿಕ ಮತದಾರರಿಗೆ ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ದಿನಾಂಕದಂದು ಹಾಜರಾಗಲು ಸಾಧ್ಯವಾಗದಿದ್ದರೆ ಒಮ್ಮೆ ಮಾತ್ರ ಕಾಲಾವಕಾಶ ಪಡೆಯಲು ಅವಕಾಶವಿದೆ. ಸಂಬಂಧಪಟ್ಟ ಮತದಾರರು ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿ ಮುಂದೆ ಖುದ್ದು ಹಾಜರಾಗಬೇಕು ಎಂದು ಅವರು ಹೇಳಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದ ಅರ್ಹ ಮತದಾರರು ಆತಂಕಪಡಬೇಕಾಗಿಲ್ಲ. ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಫಾರಂ–6 ಅಥವಾ ಫಾರಂ–8 ಮೂಲಕ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. -ಇಕ್ರಮ್ ಶರೀಫ್, ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ






