‘ವಿಕ್ಷಿತ್ ಭಾರತಕ್ಕಾಗಿ ನಶಾಮುಕ್ತ ಯುವ’ ಅಭಿಯಾನ: ಕಲಬುರಗಿಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಕಲಬುರಗಿ: ರಾಷ್ಟ್ರವ್ಯಾಪಿ “ವಿಕ್ಷಿತ್ ಭಾರತಕ್ಕಾಗಿ ನಶಾಮುಕ್ತ ಯುವ” ಅಭಿಯಾನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ಸ್ವೀಕರಿಸಿದರು.
ನಗರದ ಎಸ್.ಬಿ. ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಮೇರಾ ಯುವ ಭಾರತ್ (MY Bharat) ಕಲಬುರಗಿ ಕಚೇರಿ ವತಿಯಿಂದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಪ್ರಧಾನಮಂತ್ರಿಯವರ ಭಾಷಣದ ನೇರ ಪ್ರಸಾರ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ, ಯುವಜನತೆ ಮಾದಕ ದ್ರವ್ಯ ಸೇವನೆಯಿಂದ ದೂರವಿದ್ದು ಆರೋಗ್ಯಕರ, ಸಬಲ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಸಕ್ರಿಯವಾಗಿ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು “ವಿಕ್ಷಿತ್ ಭಾರತಕ್ಕಾಗಿ ನಶಾಮುಕ್ತ ಯುವ” ಸಂಕಲ್ಪ ಸ್ವೀಕರಿಸಿ, ಮಾದಕ ವ್ಯಸನದಿಂದ ದೂರವಿರುವುದರ ಜೊತೆಗೆ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರತಿಜ್ಞೆ ಮಾಡಿದರು.
ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣ ಹಾಗೂ ಮೇರಾ ಯುವ ಭಾರತ್ ವೇದಿಕೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಎಸ್.ಬಿ. ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ದಶರಥ್ ಮೇತ್ರೆ, ಎನ್‌ಎಸ್‌ಎಸ್ ಸಂಯೋಜಕ ದಯಾನಂದ ಹೊಡಲ್, ಮೇರಾ ಯುವ ಭಾರತ್ ಕಲಬುರಗಿ ಜಿಲ್ಲಾ ಯುವ ಅಧಿಕಾರಿ ಸುಮಿತ್ ಪಾರ್ಖಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






