ಮಿಲೆಟ್ ಹಬ್ ಕಲಬುರಗಿಗೆ ಮಂಜೂರಿಗೆ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದಲ್ಲಿ ಮಿಲೆಟ್ ಹಬ್ ಸ್ಥಾಪನೆ ಮಾಡುವುದಾಗಿ 2026–27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ 3–4 ಜಿಲ್ಲೆಗಳ ಬೇಡಿಕೆ ಇರುವುದರಿಂದ ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಹೀಗಾಗಿ ಕಲಬುರಗಿ ಜಿಲ್ಲೆಯಿಂದ ಕೃಷಿ ಇಲಾಖೆ ತಕ್ಷಣ ಡಿಪಿಆರ್ ಸಿದ್ಧಪಡಿಸಿ ನೀಲಿ ನಕ್ಷೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಜಿಲ್ಲೆಗೆ ಮಿಲೆಟ್ ಹಬ್ ಮಂಜೂರು ಮಾಡಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ–2026 ಹಾಗೂ ಜಿಲ್ಲೆಯ 2.90 ಲಕ್ಷ ರೈತರಿಗೆ ಬೆಳೆ ವಿಮೆ ಯೋಜನೆಯಡಿ ಮಧ್ಯಂತರ ಪರಿಹಾರವನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿರಿಧಾನ್ಯಗಳ ಮಹತ್ವ ಪರಿಚಯಿಸುವ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಪ್ರಚಾರ, ಸಂಶೋಧನೆ, ಸಂಸ್ಕರಣೆ ಮತ್ತು ವಿತರಣೆಗೆ ಮೀಸಲಾದ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಕಲಬುರಗಿ ರೊಟ್ಟಿಗೆ ಬ್ರ್ಯಾಂಡ್ ನೀಡಿರುವಂತೆ ಸಿರಿಧಾನ್ಯಗಳಿಗೂ ಡಿಜಿಟಲ್ ಮಾರುಕಟ್ಟೆ ವೇದಿಕೆ ಕಲ್ಪಿಸಿ ರೈತರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 4.45 ಕೋಟಿ ರೂ. ವೆಚ್ಚದಲ್ಲಿ 9 ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ಪಡೆಯಲು ಕಸ್ಟಮರ್ ಹೈರ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದೆ. 1.97 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಡ್ರೋನ್ ಸಿಂಪಡಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರದಲ್ಲಿ ಶೀತಲೀಕರಣ ಘಟಕ ನಿರ್ಮಾಣವಾಗುತ್ತಿದ್ದು, ಇದೇ ಮಾದರಿಯಲ್ಲಿ ಕಲಬುರಗಿಯಲ್ಲಿಯೂ ತರಕಾರಿ ಮತ್ತು ಟೊಮಾಟೊ ಶೇಖರಣೆಗೆ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಲಾಗುವುದು ಎಂದರು.
ಇದಲ್ಲದೆ 7.58 ಕೋಟಿ ರೂ. ವೆಚ್ಚದಲ್ಲಿ ಏಳು ಜಲನಾಯನ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲ ಯೋಜನೆಗಳ ಮೂಲಕ ಕಲಬುರಗಿ ಜಿಲ್ಲೆಯನ್ನು ಕೃಷಿ ಹಬ್ ಆಗಿ ರೂಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಚಿವರು ಹೇಳಿದರು.
ಮೂರು ವರ್ಷದಲ್ಲಿ 2,590 ಕೋಟಿ ರೂ. ಪರಿಹಾರ :
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 3.01 ಲಕ್ಷ ರೈತರು ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಮಳೆಯಿಂದ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಬೆಳೆ ವಿಮೆ ಮಾಡಿಸಿಕೊಂಡ ರೈತರ ಪೈಕಿ 2.90 ಲಕ್ಷ ರೈತರಿಗೆ 243.52 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಇಂದು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ತೊಗರಿ ನೆಡೆ ರೋಗ ಪರಿಹಾರ, ಬೆಳೆ ಪರಿಹಾರ, ಬರಗಾಲ ನೆರವು ಸೇರಿದಂತೆ ವಿವಿಧ ಯೋಜನೆಗಳಡಿ 15.47 ಲಕ್ಷ ರೈತರಿಗೆ ಒಟ್ಟು 2,590 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ವೈಜ್ಞಾನಿಕ ಸಮೀಕ್ಷೆಯಿಂದ ಹೆಚ್ಚು ಪರಿಹಾರ :
ಆಳಂದ ಶಾಸಕ ಹಾಗೂ ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ, ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ಪರಿಣಾಮ ಈ ಬಾರಿ ರೈತರಿಗೆ 243 ಕೋಟಿ ರೂ. ಪರಿಹಾರ ದೊರೆತಿದೆ. ಬೆಳೆ ಕಟಾವು ಆಧಾರದ ಮೇಲೆ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕೃಷಿ ಕ್ಷೇತ್ರದಿಂದಲೇ ಉದ್ಯೋಗ :
ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಕೃಷಿ ಕ್ಷೇತ್ರವೇ ಬಹುಸಂಖ್ಯಾತ ಜನರಿಗೆ ಉದ್ಯೋಗ ಒದಗಿಸುವ ಪ್ರಮುಖ ಕ್ಷೇತ್ರವಾಗಿದೆ. ರೈತರು ಬೆಳೆ ಬೆಳೆದಾಗ ಮಾತ್ರ ದೇಶದ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ಕೆರೆ ತುಂಬಿಸುವ ಯೋಜನೆ ಅಗತ್ಯ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಜಿಲ್ಲೆಯ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನೀರಾವರಿ ಪ್ರದೇಶ ಹೆಚ್ಚಳ ಅಗತ್ಯ. ಇದಕ್ಕಾಗಿ ಕೆರೆ ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ಒತ್ತಿ ಹೇಳಿದರು.
ಇದಕ್ಕೂ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅರ್ಹ ಫಲಾನುಭವಿಗಳಿಗೆ ಕಬ್ಬು ಕಟಾವು ಯಂತ್ರಗಳು ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಉಪಾಧ್ಯಕ್ಷೆ ನಿರ್ಮಲಾ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡುರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಅಯುಕ್ತೆ ಸಾಹಿತ್ಯ ಅಲದಕಟ್ಟಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಉಪನಿರ್ದೇಶಕಿ ಅನುಸುಯಾ ಹೂಗಾರ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ರೈತಾಪಿ ಜನರು ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸ್ವಾಗತಿಸಿ ವಂದಿಸಿದರು.







