ಚುನಾವಣಾ ಆಯೋಗವು ಕೇಂದ್ರದ ಕೈಗೊಂಬೆಯಾಗಿದೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ: ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಮತಗಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆರೋಪಿಸಿದ್ದಾರೆ.
ಸೇಡಂ ಪಟ್ಟಣದ ಕೆ.ಎನ್.ಝಡ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತಗಳ್ಳತನದ ಹಾದಿ ಹಿಡಿದಿದೆ. ಈ ಅಕ್ರಮಗಳ ವಿರುದ್ಧ ಶೀಘ್ರದಲ್ಲೇ ದೇಶಾದ್ಯಂತ ಹೋರಾಟ ನಡೆಸಲಾಗುವುದು. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಡವರ ಪಾಲಿನ ಆಸರೆಯಾಗಿದ್ದ ನರೇಗಾ ಯೋಜನೆಯನ್ನು ರದ್ದು ಮಾಡಿದೆ. ಅಷ್ಟೇ ಅಲ್ಲದೆ, ಯೋಜನೆಯಿಂದ ಮಹಾತ್ಮ ಗಾಂಧೀಜಿಯವರ ಹೆಸರನ್ನೇ ತೆಗೆದು ಹಾಕುವ ಮೂಲಕ ಬಡವರ ವಿರೋಧಿ ನೀತಿ ತಳೆದಿದೆ. ಶ್ರೀಮಂತರು ಹಾಗೂ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ಬಡವರ ಅಭಿವೃದ್ಧಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಪರವಾಗಿ ನಿಂತಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ನಾಗೇಶ್ವರರಾವ್ ಮಾಲಿಪಾಟೀಲ್, ಮಧುಸೂದನ ರೆಡ್ಡಿ ಮುಧೋಳ, ಮಹಾಂತಪ್ಪ ಸಂಗಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್, ದೂಳಪ್ಪ ದೊಡ್ಡಮನಿ, ಜಗನ್ನಾಥ ಚಿಂತ್ಪಳ್ಳಿ, ರವೀಂದ್ರ ನಂದಿಗಾಮ್, ಸುಭಾಷ ರಾಠೋಡ್, ಗಫೂರ್ ಸಾಬ್, ಭೀಮಾಶಂಕರ ಕೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







