ಕಲಬುರಗಿ ಜಿಲ್ಲಾ ಪ್ರಿಂಟರ್ಸ್ ಅಸೋಸಿಯೇಷನ್ ಸ್ಥಾಪನೆ: ನ.1ರಂದು ಉದ್ಘಾಟನೆ

ಕಲಬುರಗಿ : ಜಿಲ್ಲೆಯ ಮುದ್ರಣ ಉದ್ಯಮಿಗಳ ಹಕ್ಕು, ಗೌರವ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕಲಬುರಗಿ ಜಿಲ್ಲಾ ಪ್ರಿಂಟರ್ಸ್ ಅಸೋಸಿಯೇಷನ್ ಸ್ಥಾಪಿಸಲಾಗಿದ್ದು, ನವೆಂಬರ್ 1ರಂದು ನೂತನ ಸಂಘಟನೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮುದ್ರಣ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಉದ್ಯಮದ ಅಭಿವೃದ್ಧಿಗೆ ಸಂಘಟಿತವಾಗಿ ಶ್ರಮಿಸುವುದು ಅಸೋಸಿಯೇಷನ್ನ ಮುಖ್ಯ ಉದ್ದೇಶವಾಗಿದೆ.
ಕಾಗದ ಮತ್ತು ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ಹಾಗೂ ನಿರ್ವಹಣಾ ವೆಚ್ಚ, ಕಾರ್ಮಿಕರ ಸಮಸ್ಯೆಗಳು, ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಮುದ್ರಣ ಉದ್ಯಮಿಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಗಳಿಗೆ ಸಂಘಟಿತವಾಗಿ ಪರಿಹಾರ ಕಂಡುಕೊಳ್ಳುವುದು, ಸರ್ಕಾರಿ ಹಾಗೂ ಖಾಸಗಿ ಮುದ್ರಣ ಕೆಲಸಗಳಲ್ಲಿ ಸ್ಥಳೀಯ ಉದ್ಯಮಿಗಳಿಗೆ ಆದ್ಯತೆ ದೊರಕಿಸುವುದು, ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದು ಹಾಗೂ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಸಂಘಟನೆಯ ಪ್ರಮುಖ ಗುರಿಗಳಾಗಿವೆ ಎಂದು ತಿಳಿಸಿದರು.
ಜಿಲ್ಲೆಯ ಮುದ್ರಣ ಕ್ಷೇತ್ರಕ್ಕೆ ರಾಜ್ಯಮಟ್ಟದಲ್ಲಿ ಗುರುತಿನ ಸ್ಥಾನ ಕಲ್ಪಿಸುವ ಸಂಕಲ್ಪದೊಂದಿಗೆ ‘ಒಗ್ಗಟ್ಟಾಗಿ ನಿಲ್ಲೋಣ, ಮುದ್ರಣ ಉದ್ಯಮವನ್ನು ಬೆಳೆಸೋಣ’ ಎಂಬ ಘೋಷವಾಕ್ಯದಡಿ ಅಸೋಸಿಯೇಷನ್ ಕಾರ್ಯನಿರ್ವಹಿಸಲಿದೆ ಎಂದು ಸಂಘಟನೆಯ ಸದಸ್ಯರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ರವೀಂದ್ರ ಮುಕ್ತಾರ್, ಕೈಲಾಸ್ ಮೋರೆ, ಶಿವಕುಮಾರ್ ಬಿರಾದಾರ್, ಅರುಣಕುಮಾರ್, ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






