ಕಲಬುರಗಿ | ಪ್ರತಿಯೋರ್ವ ನಾಗರಿಕನಿಗೆ ಮೋದಿಯನ್ನು ಪ್ರಶ್ನಿಸುವ ಹಕ್ಕಿದೆ : ಜಗದೇವ ಗುತ್ತೇದಾರ್

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನೇ ಗುರಿಯಾಗಿಸಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ, ಮೋದಿಯನ್ನು ಪ್ರಶ್ನಿಸಲು ಖರ್ಗೆ ಅವರಿಗಷ್ಠೇ ಅಲ್ಲ, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಹಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಎಂಎಲ್ ಸಿ ಜಗದೇವ ಗುತ್ತೇದಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗದೇವ ಗುತ್ತೇದಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ಹಲವು ಭ್ರಷ್ಟಾಚಾರಗಳನ್ನು ಬಯಲಿಗೆಳೆದಿದ್ದಾರೆ. ಹಾಗಾಗಿ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಬಿಜೆಪಿಯಿಂದ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಖರ್ಗೆ ಕುಟುಂಬದವರನ್ನು ನಿಂದಿಸಲು ಛಲವಾದಿ ನಾರಾಯಣಸ್ವಾಮಿ ಎಂಬವರನ್ನು ಛೂ ಬಿಡುತ್ತಿದ್ದಾರೆ ಎಂದರು.
ಛಲವಾದಿ ನಾರಾಯಣಸ್ವಾಮಿಗೆ ಚಿತ್ತಾಪೂರದಲ್ಲಿ ದಿಗ್ಬಂಧನ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಅವರನ್ನು ಪ್ರಶ್ನಿಸಲು ಕೆಲ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರ ಬಳಿ ಹೋಗಿದ್ದರು. ಆದರೆ ಗಲಾಟೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರನ್ನು ಒಳಗೆ ಬಿಟ್ಟಿಲ್ಲ, ಇದನ್ನೇ ದಿಗ್ಬಂಧನ ಎಂದು ಬಿಜೆಪಿ ಗೋಳಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಈಡಿ, ಸಿಬಿಐ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ. ಕೆಲ ಬಿಜೆಪಿ ಸಚಿವರು, ನಾಯಕರುಗಳು ದೇಶ ಕಾಯುವ ಸೈನಿಕರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿಗರ ಅಸಭ್ಯ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನಾರಾಯಣಸ್ವಾಮಿ ಗಾದೆ ಬಗ್ಗೆ ಮಾತನಾಡಲಿ ಯಾರೂ ಬೇಡ ಅನ್ನಲ್ಲ, ಆದರೆ, ಅವರು ನೇರವಾಗಿ ಖರ್ಗೆ ಅವರನ್ನು ಕೆಟ್ಟದಾಗಿ ಟೀಕಿಸಿರುವುದು ಅಕ್ಷಮ್ಯ ಅಪರಾಧ. ಈ ವಿಷಯವನ್ನೇ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗರು ಕೇವಲ ಪ್ರಚಾರ ಪ್ರಿಯರಷ್ಟೇ. ಇವರಿಗೆ ಯಾವುದೇ ದೇಶಪ್ರೇಮ ಇಲ್ಲ ಎಂದು ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಶಿವಾನಂದ ಪಾಟೀಲ್ ಮರ್ತೂರ್, ಡಾ.ಕಿರಣ್ ದೇಶಮುಖ್, ಸಂಗಮೇಶ್ ನಾಗನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







