ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಳಂದ ಕೈಬಿಟ್ಟಿರುವುದು ಖಂಡನೀಯ: ಮಾಜಿ ಶಾಸಕ ಸುಭಾಷ್ ಗುತ್ತೇದಾರ

ಆಳಂದ: ಬರದ ತೀವ್ರ ಸಂಕಷ್ಟ ಎದುರಿಸುತ್ತಿರುವ ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯ ಹಾಗೂ ಆಳಂದ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನ ರೈತರು ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಕೊರತೆಯಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಳಂದವನ್ನು ಕೈಬಿಟ್ಟಿರುವುದು ಸರ್ಕಾರದ ರೈತಪರ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೂವರು ಪ್ರಭಾವಿ ಸಚಿವರು ಇದ್ದರೂ ಕಲಬುರಗಿ ಜಿಲ್ಲೆಯ ಒಂದೇ ಒಂದು ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದಿರುವುದು ಜಿಲ್ಲೆಯ ಪಾಲಿಗೆ ದುರಂತವೇ ಸರಿ. ಜಿಲ್ಲೆಯ ಜನರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದು ಜಿಲ್ಲೆಯ ರೈತರ ದುರ್ದೈವ ಎಂದು ಅವರು ಟೀಕಿಸಿದ್ದಾರೆ.
ಪೈಪ್‌ಲೈನ್ ಕಾಮಗಾರಿಗಾಗಿ ನಡೆಸುತ್ತಿರುವ ಪಾದಯಾತ್ರೆ ಹಾಗೂ ಪ್ರತಿಭಟನೆಗಳು ಜನರ ಗಮನವನ್ನು ನೈಜ ಸಮಸ್ಯೆಯಿಂದ ಬೇರೆಡೆ ಸೆಳೆಯುವ ರಾಜಕೀಯ ನಾಟಕವಾಗಿವೆ. ತಮ್ಮದೇ ಸರ್ಕಾರದ ಮುಂದೆ ತಮ್ಮ ತಾಲೂಕಿನ ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದವರು ಪಾದಯಾತ್ರೆ ನಡೆಸಿ ಯಾರಿಗೆ ನ್ಯಾಯ ಕೊಡಿಸುತ್ತಾರೆ? ಎಂದು ಸುಭಾಷ ಗುತ್ತೇದಾರ ಅವರು ಆರ್.ಕೆ ಪಾಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ.






