ತೆಲ್ಕೂರ್ ಮೇಲಿನ ಸುಳ್ಳು ಪ್ರಕರಣ ಖಂಡನೀಯ: ಶಿವಶರಣ ಶಂಕರ

ಸೇಡಂ: ತೀವ್ರ ಬರಗಾಲದ ನಡುವೆಯೂ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸುವ ಪ್ರಯತ್ನ ನಡೆದಿದ್ದು, ರೈತಪರ ಹೋರಾಟಗಾರ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಮತ್ತು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಸೇಡಂ ಮಂಡಲ ಅಧ್ಯಕ್ಷ ಶಿವಶರಣ ಶಂಕರ ಮೆಡಿಕಲ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
“ಜಿಲ್ಲೆಯ ಹಲವೆಡೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆದರೆ, ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಇನ್ನೂ ರೈತರ ಕೈ ಸೇರಿಲ್ಲ. ಇಂತಹ ಭೀಕರ ಪರಿಸ್ಥಿತಿಯಲ್ಲಿಯೂ ಸರ್ಕಾರ ಪ್ರಕಟಿಸಿದ ಮೊದಲ ಹಂತದ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯನ್ನು ಕೈಬಿಟ್ಟಿರುವುದು ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮೂವರು ಸಚಿವರ ವಿರುದ್ಧ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದರು.
“ರೈತರ ಮೇಲೆ ವಾಹನಗಳು ನುಗ್ಗುವಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಯಾವುದೇ ತಪ್ಪು ಮಾಡದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಹಾಗೂ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ. ಇದು ರೈತರ ಹಾಗೂ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಓಂಪ್ರಕಾಶ್ ಪಾಟೀಲ್, ಸೇಡಂ ಮಂಡಲ ಬಿಜೆಪಿ ಉಪಾಧ್ಯಕ್ಷ ವೀರೇಶ್ ಹೂಗಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಒಬಿಸಿ ಮೋರ್ಚಾ ಅಧ್ಯಕ್ಷ ಮಹಾದೇವಪ್ಪ ಗೋಣಿ, ಎಸ್ಸಿ ಮೋರ್ಚಾ ಅಧ್ಯಕ್ಷ ರಾಮು ಕಣೆಕಲ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಬೀಮು ನಾಯಕ್, ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಪ್ಯಾಟಿ, ನಾಗಪ್ಪ ಕೊಳ್ಳಿ, ಶಿವಾನಂದ ಸ್ವಾಮಿ, ಶ್ರೀಮಂತ ಅವಂಟಿ, ರವಿ ನಾಯಕ, ಸಿದ್ದಲಿಂಗ ಗೌತಮ್, ನಾಗರಾಜ್ ಪಾಟೀಲ್ ತೊಟ್ನಳ್ಳಿ, ನಾಗೇಂದ್ರಪ್ಪ ರಾಜಪುರ್, ವಿಷ್ಣು ಊಡುಗಿ, ಜೈಪ್ರಕಾಶ್ ರಾಥೋಡ್, ನಾಗು ದೊರೆ, ರೇವಣಸಿದ್ದಪ್ಪ ಬಿರೆದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.






