ತಳವಾರ ಸಮಾಜಕ್ಕೆ ಎಸ್.ಟಿ ಪ್ರಮಾಣ ಪತ್ರ | ರಾಜಕೀಯ ಮುಖಂಡರಿಂದ ಸುಳ್ಳು ಹೇಳಿಕೆ: ನಂದಕುಮಾರ್ ಮಾಲಿಪಾಟೀಲ್ ಆರೋಪ

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ನಾಯಕ, ವಾಲ್ಮೀಕಿ, ಬೇಡ ಸಮುದಾಯದಲ್ಲಿರುವ ತಳವಾರ ಹಾಗೂ ಪರಿವಾರ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಕೆಲ ರಾಜಕೀಯ ಮುಖಂಡರು, ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವಿಭಾಗಿ ಅಧ್ಯಕ್ಷ ನಂದಕುಮಾರ್ ಮಾಲಿಪಾಟೀಲ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿ.24 ರಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು, ನಾಯ್ಕಡ್, ನಾಯಕದ ತಳವಾರ, ಪರಿವಾರ ಜಾತಿಗೆ ಸೇರಿದ ವ್ಯಕ್ತಿಗಳಿಗೆ ಮಾತ್ರ ಎಸ್.ಟಿ ಪ್ರಮಾಣ ಪತ್ರ ನೀಡಬೇಕೇ ಹೊರತು ಹಿಂದುಳಿದ ವರ್ಗದಲ್ಲಿರುವ ತಳವಾರ ಜಾತಿಗೆ ಎಸ್.ಟಿ ಪ್ರಮಾಣ ಪತ್ರಗಳನ್ನು ನೀಡಬಾರದು ಎಂದು ಸರಕಾರದ ಹಿಂದಿನ ಎಲ್ಲಾ ಆದೇಶಗಳನ್ನು ಉಲ್ಲೇಖಿಸಿ ಸ್ಪಷ್ಟೀಕರಣ ನೀಡಿದ್ದಾರೆ, ಆದರೆ ಇದನ್ನೇ ಬಂಡವಾಳವನ್ನು ಇಟ್ಟುಕೊಂಡು ಕೆಲಸ ಕೋಲಿ ಸಮಾಜದ ರಾಜಕೀಯ ಮುಖಂಡರು, ಹಿಂದುಳಿದ ವರ್ಗದ ತಳವಾರಗೆ ಎಸ್. ಟಿ ಪ್ರಮಾಣ ಕೊಡಿಸಿದ್ದೇನೆಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ಕಲಬುರಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ವ್ಯಾಪ್ತಿಯಲ್ಲಿ ಬರುವ ಕೋಲಿ, ಕಬ್ಬಲಿಗ, ಬೆಸ್ತ ಜನಾಂಗದವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಬಾರದು, ಈ ಕುರಿತು ಸುಳ್ಳು ವದಂತಿಗಳಿಗೆ ಅಧಿಕಾರಿಗಳು ಕಿವಿ ಕೊಡಬಾರದೆಂದು ಒತ್ತಾಯಿಸಿದರು.
ಒಂದು ವೇಳೆ ಹಿಂದುಳಿದ ತಳವಾರ ಜಾತಿಗೆ ಈ. ಟಿ ಪ್ರಮಾಣ ಪತ್ರ ನೀಡಿದರೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶರಣು ಸುಬೇದಾರ್, ಶ್ರವಣ್ ಕುಮಾರ್ ನಾಯಕ್, ಬಾಬುರಾವ್ ಬಡಿಗೇರ್, ಗುರಣ ಬಡಿಗೇರ್, ಮಾರುತಿ ಜಮಾದಾರ್, ಭೀಮರಾವ್ ದೊರೆ, ರಾಮು ನಾಯಕ್, ನಾಗರಾಜ್ ದೊರೆ ಜೇವರ್ಗಿ ಹಾಜರಿದ್ದರು.







