ಚಿತ್ತಾಪುರವನ್ನು ಬರಪೀಡಿತ ತಾಲೂಕು ಘೋಷಿಸುವಂತೆ ರೈತ ಸಂಘ ಮನವಿ

ಚಿತ್ತಾಪುರ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ತಕ್ಷಣ ಪರಿಹಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ನೇತೃತ್ವದಲ್ಲಿ ನಡೆದ ಮನವಿ ಸಲ್ಲಿಕೆ ವೇಳೆ ಮಾತನಾಡಿದ ಅವರು, ಚಿತ್ತಾಪುರ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಮಳೆ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿದ್ದು, ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಚಿತ್ತಾಪುರ ತಾಲೂಕನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಈ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಚಿತ್ತಾಪುರ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಹಿಂಗಾರು ಬಿತ್ತನೆಗೆ ಅಗತ್ಯ ಬೀಜಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಾಲೂಕಿನ ಕೆಲ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿದ್ದರೂ ಇನ್ನೂ ಅನೇಕ ಅರ್ಹ ರೈತರಿಗೆ ವಿಮೆ ಪರಿಹಾರ ದೊರೆತಿಲ್ಲ. ಉಳಿದ ಎಲ್ಲಾ ರೈತರ ಖಾತೆಗಳಿಗೆ ಕೂಡಲೇ ಬೆಳೆ ವಿಮೆ ಹಣ ಜಮೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಶಾಂತಕುಮಾರ್ ಮಳಖೇಡ, ನಗರಾಧ್ಯಕ್ಷ ವಿಠಲ್ ಕಟ್ಟಿಮನಿ, ಶಿವರಾಮ ಚವ್ಹಾಣ, ತುಕಾರಾಮ ನಾಯಕ, ಪ್ರಕಾಶ ಸಲಗರ, ಮೋಹನ ಬೆಂಜಿ, ನರಹರಿ ಕುಲಕರ್ಣಿ, ಶ್ರೀಕಾಂತ ಹೊಸಳ್ಳಿಕರ್, ಮಂಜುನಾಥ ಕಾಶಿ, ಮಹ್ಮದ್ ಅಲಿ, ಯೂಸುಫ್ ಖಾನ್ ಸೇರಿದಂತೆ ಇತರರು ಇದ್ದರು.






