ಕೇಂದ್ರ ಬಜೆಟ್‌ನಲ್ಲಿ ರೈತರ ನಿರೀಕ್ಷೆಗಳಿಗೆ ನಿರಾಸೆ: ಮಹಾಂತೇಶ್ ಜಮಾದಾರ್

ಅಫಜಲಪೂರ: ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ರೈತ ವಿರೋಧಿ ಧೋರಣೆ ಸ್ಪಷ್ಟವಾಗಿ ಕಾಣಿಸಿದೆ, ರೈತರ ಎಲ್ಲ ನಿರೀಕ್ಷೆಗಳಿಗೆ ನಿರಾಶೆಯಾಗಿದೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಮಹಾಂತೇಶ ಜಮಾದಾರ ಹೇಳಿದ್ದಾರೆ.
ವಿಶೇಷವಾಗಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಕಬ್ಬು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಿಗೆ ರೈತರು ಬಹುದಿನಗಳಿಂದ ಆಗ್ರಹಿಸುತ್ತಿದ್ದ ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಬದ್ಧತೆ ನೀಡುವ ಕುರಿತು ಯಾವುದೇ ಘೋಷಣೆ ಇಲ್ಲ. ಇದರಿಂದ ರೈತರ ನಿರೀಕ್ಷೆಗಳು ಸಂಪೂರ್ಣವಾಗಿ ಭಂಗಗೊಂಡಿವೆ ಎಂದು ಹೇಳಿದರು.
ಬಜೆಟ್‌ನಲ್ಲಿ ತೆಂಗಿನ ಬೆಳೆಗೆ ಉತ್ತೇಜನ ಘೋಷಿಸಿರುವುದಾದರೂ, ದಕ್ಷಿಣ ಭಾರತದ ಬಹುಮುಖ್ಯ ಆರ್ಥಿಕ ಬೆಳೆಗಳಾದ ಮಾವು ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳಿಗೆ ಯಾವುದೇ ಆದ್ಯತೆ ನೀಡಿಲ್ಲ. ಇದು ತೋಟಗಾರಿಕಾ ಕ್ಷೇತ್ರದ ಮೇಲಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇನ್ನೂ ರೈತರಿಗೆ ನೆರವಾಗಬೇಕಾದ ಶೂನ್ಯ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸುವ ಕುರಿತು ಸಹ ಯಾವುದೇ ಘೋಷಣೆ ಮಾಡಿಲ್ಲ ಎಂದು ದೂರಿದರು.





