ಬರ ಘೋಷಣೆಗೆ ಆಗ್ರಹಿಸಿ ಸೇಡಂನಲ್ಲಿ ರೈತರಿಂದ ಹೆದ್ದಾರಿ ತಡೆ ಪ್ರತಿಭಟನೆ

ಸೇಡಂ: ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸೇಡಂ ತಾಲೂಕನ್ನು ಕೂಡಲೇ ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ನೂರಾರು ರೈತರು ಮಂಗಳವಾರ ಪಟ್ಟಣದ ಚಿಂಚೋಳಿ ಕ್ರಾಸ್ ಬಳಿ ಹೆದ್ದಾರಿ ತಡೆ ನಡೆಸಿದರು. ರಸ್ತೆಯ ಮಧ್ಯೆಯೇ ಟೆಂಟ್ ಹಾಕಿಕೊಂಡು ತಾಳ, ಡೋಲಕ್ ಹಾಗೂ ಹಾರ್ಮೋನಿಯಂನೊಂದಿಗೆ ಭಜನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಐತಿಹಾಸಿಕ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಟ್ರ್ಯಾಕ್ಟರ್‌ಗಳು ಹಾಗೂ ಎತ್ತಿನ ಬಂಡಿಗಳೊಂದಿಗೆ ಚಿಂಚೋಳಿ ಕ್ರಾಸ್‌ಗೆ ಆಗಮಿಸಿದರು. ಬಳಿಕ ವಾಹನಗಳನ್ನು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರ ಸ್ಥಗಿತಗೊಳಿಸಿ ಧರಣಿ ಆರಂಭಿಸಿದರು.
‘ನೆರೆಯ ತಾಲೂಕುಗಳಿಗೆ ಬರಪೀಡಿತ ಪಟ್ಟ ನೀಡಲಾಗಿದೆ. ಸೇಡಂ ತಾಲೂಕಿಗೆ ಮಾತ್ರ ಏಕೆ ನೀಡಿಲ್ಲ?’ ಎಂದು ಪ್ರಶ್ನಿಸಿದ ರೈತರು, ಮಳೆಯ ಕೊರತೆಯಿಂದ ತಾಲೂಕಿನಾದ್ಯಂತ ಬೆಳೆಗಳು ಒಣಗಿ ಹೋಗಿವೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಸೇಡಂ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಅವರು, ಸೇಡಂ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಿದರು.
ಆದರೆ ತಹಸೀಲ್ದಾರ್ ಅವರ ಮನವಿಗೆ ಒಪ್ಪದ ರೈತರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬರಪೀಡಿತ ಘೋಷಣೆ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. “ನಿಮ್ಮ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಮೊದಲು ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ” ಎಂದು ಆಗ್ರಹಿಸಿದ ರೈತರು, ಟೆಂಟ್‌ನಲ್ಲೇ ಭಜನೆ ಹಾಗೂ ನಾಮಸ್ಮರಣೆ ಮುಂದುವರಿಸಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡರಾದ ಶಾಂತಕುಮಾರ ಚನ್ಬಕ್ಕಿ, ಮನೋಹರ್ ರೆಡ್ಡಿ ಬಟಗೇರಾ, ಶಿವಕುಮಾರ ಪಾಟೀಲ ತೆಲ್ಕೂರ, ಶಿವಕುಮಾರ ಬೊಳಶೆಟ್ಟಿ, ಅಮಶೆಟ್ಟಿ ಪಾಟೀಲ್ ಹೆಡ್ಡಳ್ಳಿ, ನಾಗೇಂದ್ರಪ್ಪ ಪಾಟೀಲ್ ಕುಕ್ಕುಂದಾ, ಭೀಮರಾವ್ ಮಾಲಿ ಪಾಟೀಲ್ ಮಳಖೇಡ, ರವಿ ಪಾಟೀಲ್ ಸೂರವಾರ, ಮಹೇಶ್ ರೆಮಗೊಂಡ, ಅಮರ್ ಪಾಟೀಲ್ ಹೊಸಳ್ಳಿ, ದೊಡ್ಡಪ್ಪ ಗೌಡ ಹಳ್ಳಿಖೇಡ, ವರದಾ ಸ್ವಾಮಿ, ಚಂದ್ರಕಾಂತ ತೊಟ್ನಳ್ಳಿ, ಶಿವಪುತ್ರಪ್ಪ ಊಡಗಿ, ಕಿಷ್ಟಪ್ಪ ಚಿಟಕನಪಲ್ಲಿ, ವೆಂಕಟಪ್ಪ ನೀರೆಟಿ, ನರಸಿಂಗ ಮೀನಹಾಬಾಳ, ಮಲ್ಲಿಕಾರ್ಜುನ ಮೆಕ್ಯಾನಿಕ್, ವಿಜಯಕುಮಾರ ಆಡಕಿ, ಮಹೇಶ, ರಾಜಶೇಖರ ರೆಡ್ಡಿ ಮೊಟ್ನಳ್ಳಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






