ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಹೊಡೆದಾಟ

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಕೈದಿ ಹಾಗೂ ಸ್ಥಳೀಯ ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ, ಬಳಿಕ ಗಂಭೀರ ಹೊಡೆದಾಟಕ್ಕೆ ತಿರುಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಮೂಲದ ವೆಂಕಟರಮಣ ಎಂಬ ಕೈದಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಕೇಳಿಬಂದಿದ್ದು, ಇದಕ್ಕೆ ಪ್ರತಿಯಾಗಿ ಸ್ಥಳೀಯ ಕೈದಿಗಳೂ ಅವಾಚ್ಯ ಪದಗಳಿಂದ ಉತ್ತರಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ರೊಚ್ಚಿಗೆದ್ದ ಸ್ಥಳೀಯ ಕೈದಿಗಳು ವೆಂಕಟರಮಣನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಲಾಟೆಯ ವೇಳೆ ಕಾರಾಗೃಹದಲ್ಲಿದ್ದ ಟಿವಿಯನ್ನು ವೆಂಕಟರಮಣ ಒಡೆದು ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ವೆಂಕಟರಮಣನನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಕ್ಷಾತ್ಮಕ ವರ್ಗಾವಣೆಯ ಮೂಲಕ ಕಳುಹಿಸಲಾಗಿತ್ತು. ಈ ಹಿಂದೆ ವೀಡಿಯೋ ಬಿಡುಗಡೆ ಪ್ರಕರಣದ ಹಿನ್ನೆಲೆಯಲ್ಲಿ ಅವನಿಗೆ ಪನಿಷ್‌ಮೆಂಟ್ ಟ್ರಾನ್ಸ್‌ಫರ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಜೈಲಿನೊಳಗೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿದ ತಕ್ಷಣ ಎಸಿಪಿ ಸೇರಿದಂತೆ ಫರಹತಾಬಾದ್ ಠಾಣೆಯ ಇನ್ಸ್‌ಪೆಕ್ಟರ್ ಹುಸೇನ್ ಭಾಷಾ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಜೈಲಿಗೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ನಾಲ್ಕು ದಿನಗಳ ಹಿಂದೆ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ತೀವ್ರ ಶೋಧ ನಡೆಸಿ, ಅಕ್ರಮ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂದು ಕಠಿಣ ಎಚ್ಚರಿಕೆ ನೀಡಿದ್ದರು.
ಜೈಲಿನೊಳಗಿನ ಜೂಜಾಟ, ಮದ್ಯಪಾನ, ಧೂಮಪಾನ ಸೇರಿದಂತೆ ಅಕ್ರಮ ಚಟುವಟಿಕೆಗಳ ವೀಡಿಯೋಗಳು ವೈರಲ್ ಆಗಿರುವ ಪ್ರಕರಣಗಳ ತನಿಖೆ ನಡೆಯುತ್ತಿರುವ ನಡುವೆಯೇ ಮತ್ತೊಂದು ಗಲಾಟೆ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.







