ಕಲಬುರಗಿ | ನೇಕಾರರ ಸಮ್ಮಾನ ಯೋಜನೆಯಡಿ ಆರ್ಥಿಕ ನೆರವು: ಅರ್ಜಿ ಆಹ್ವಾನ

ಕಲಬುರಗಿ : ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರರ ಸಮ್ಮಾನ ಯೋಜನೆಯಡಿ 2025-26ನೇ ಸಾಲಿನಲ್ಲಿ ಕಾರ್ಯನಿರತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವವರಿಗೆ ವಾರ್ಷಿಕ 5000 ರೂ. ಗಳ ಆರ್ಥಿಕ ನೆರವನ್ನು ಡಿ.ಬಿ.ಟಿ ಮೂಲಕ ನೇರ ವರ್ಗಾವಣೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ 2025ರ ಸೆ.15 ರಂದು ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೈಮಗ್ಗ ಮತ್ತು ವಿದ್ಯುತ್ ಮಗ್ಗದ ನೇಕಾರರು ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವವರು ನಿಗದಿತ ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, “ಜಲ ಭವನ” ನೆಲಮಹಡಿ, ರಾಜಾಪುರ-ಕುಸನೂರ ರಸ್ತೆ, ಕಲಬುರಗಿ ಕಚೇರಿಯನ್ನು ಸಂಪರ್ಕಿಸಲು ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-278629 ಕ್ಕೆ ಸಂಪರ್ಕಿಸಲು ಕೋರಲಾಗಿದೆ.
Next Story





