ದಿಲ್ಲಿ ಗಡಿಯಲ್ಲಿ ರೈತರ ಹೋರಾಟಕ್ಕೆ ಐದು ವರ್ಷ : ನ.26ರಂದು ದೇಶಾದ್ಯಂತ ಪ್ರತಿಭಟನೆ ; ರಾಜನ್ ಕ್ಷೀರಸಾಗರ್

ಕಲಬುರಗಿ : ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದಿಲ್ಲಿ ಗಡಿಯಲ್ಲಿ ನಡೆದ ರೈತರ ಹೋರಾಟಕ್ಕೆ ಐದು ವರ್ಷಗಳು ತುಂಬುತ್ತಿವೆ. ಅದರ ಅಂಗವಾಗಿ ನ.26ರಂದು ದೇಶದ ಎಲ್ಲಾ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಅಧ್ಯಕ್ಷ ರಾಜನ್ ಕ್ಷೀರಸಾಗರ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜನ್ ಕ್ಷೀರಸಾಗರ್, ರೈತರ ಹೋರಾಟಕ್ಕೆ ಐದು ವರ್ಷ ಕಳೆದರೂ ಬೆಂಬಲ ಬೆಳೆಯನ್ನು ಕಾನೂನು ಬದ್ಧಗೊಳಿಸಲು ಕೇಂದ್ರ ಸರಕಾರ ವಿಫಲವಾಗಿದೆ. ಎಂಎಸ್‌ಪಿ ಕಾಯ್ದೆ ಇನ್ನೂ ಕೂಡ ಜಾರಿಗೊಳಿಸಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟಾದರೂ ಕೇಂದ್ರ ಸರಕಾರ ಅದನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಣೆ ಮಾಡಿಲ್ಲ. ಸಮರ್ಪಕವಾಗಿ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ. ಎನ್‌ಡಿಆರ್‌ಎಫ್ ನಿಯಮಗಳನ್ನು ಪರಿಷ್ಕರಿಸಿ ಪರಿಹಾರದಲ್ಲೂ ರೈತರಿಗೆ ವಂಚಿಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಐಕೆಎಸ್ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ, ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಚೌಧರಿ, ಮುಖಂಡರಾದ ಸಾಜೀದ್ ಅಹ್ಮದ್ ದಿಗ್ಗಾಂವಕರ್, ಸಿದ್ದಣ್ಣ ಕನ್ನೂರ್, ಶರಣಬಸಪ್ಪ ಗಣಜಲಖೇಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







