ಜನಪದ ಸಾಹಿತ್ಯ, ಸಂಸ್ಕೃತಿ ನಶಿಸುತ್ತಿದೆ: ಎ.ಕೆ. ರಾಮೇಶ್ವರ ಕಳವಳ

ಕಲಬುರಗಿ: ಆಧುನಿಕತೆಯ ಭರಾಟೆಯಲ್ಲಿ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ನಿಧಾನವಾಗಿ ನಶಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಎ.ಕೆ. ರಾಮೇಶ್ವರ ಆತಂಕ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದಲ್ಲಿ ನಡೆದ ಕಾರ್ಯಜನದಲ್ಲಿ ಮಾತನಾಡಿದ ಅವರು, ಜನಪದ ಸಾಹಿತ್ಯವು ನಮ್ಮ ಪೂರ್ವಜರ ಜೀವನಾನುಭವ, ಆಚಾರ-ವಿಚಾರ, ಸಂಪ್ರದಾಯ, ನಂಬಿಕೆ ಹಾಗೂ ಸಾಮಾಜಿಕ ಬದುಕಿನ ಪ್ರತಿಬಿಂಬವಾಗಿದೆ. ಜನಪದ ಹಾಡು, ಲಾವಣಿ, ಗಾದೆ, ಒಗಟು, ಕಥೆ ಹಾಗೂ ಗ್ರಾಮೀಣ ಕಲೆಗಳು ನಮ್ಮ ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿವೆ. ಆದರೆ ಬದಲಾಗುತ್ತಿರುವ ಜೀವನಶೈಲಿ, ತಂತ್ರಜ್ಞಾನ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅವು ಮರೆಯಾಗುತ್ತಿವೆ ಎಂದರು.
ಜನಪದ ಕಲಾವಿದರನ್ನು ಗುರುತಿಸಿ ಅವರಿಗೆ ಗೌರವ, ಆರ್ಥಿಕ ನೆರವು ಹಾಗೂ ಸೂಕ್ತ ವೇದಿಕೆ ಒದಗಿಸಬೇಕು. ಶಾಲಾ-ಕಾಲೇಜುಗಳಲ್ಲಿ ಜನಪದ ಸಾಹಿತ್ಯ ಮತ್ತು ಕಲೆಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿ ಯುವಜನರಲ್ಲಿ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜನಪದ ಸಾಹಿತ್ಯ ಕೇವಲ ಮನರಂಜನೆಯಲ್ಲ; ಅದು ನಮ್ಮ ಬದುಕಿನ ಇತಿಹಾಸ, ಸಾಮಾಜಿಕ ಪ್ರಜ್ಞೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕ. ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ಪಾಸಾಹೇಬ ತೀರ್ಥೆ, ಸಿದ್ರಾಮಪ್ಪ ಗುಂಡುರೆ, ಡಾ. ಅವಿನಾಶ ಎಸ್. ದೇವನೂರ, ಡಾ. ಸಂಗೀತಾ ಹಿರೇಮಠ, ಮೃತ್ಯುಂಜಯ ಪಾಟೀಲ, ಮಹೇಶ ಸಾಖರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






