ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಆಚರಣೆ

ಕಲಬುರಗಿ : ಕಾಲೇಜು ಶಿಕ್ಷಣ ಇಲಾಖೆಯ ಆದೇಶದಂತೆ ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತ್ಯಂತ ಅದ್ದೂರಿಯಾಗಿ ಜಾನಪದ ಉತ್ಸವವನ್ನು ಆಚರಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕಿಂತ ಮೊದಲು ಪಟ್ಟಣದ ಮಿನಿ ವಿಧಾನಸೌಧದಿಂದ ಕಾಲೇಜಿನವರೆಗೆ ನಡೆದ ಎತ್ತಿನ ಬಂಡಿಯ ಮೆರವಣಿಗೆ ನಡೆಯಿತು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ, ಜೇವರ್ಗಿ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರಿಗೆ ಪ್ರಾಂಶುಪಾಲರಾದ ಡಾ.ಲಕ್ಷ್ಮಣ ಭೋಸ್ಲೆ ಮತ್ತು ಜಾನಪದ ಉತ್ಸವದ ಸಂಚಾಲಕರಾದ ಡಾ.ಖಾಜಾವಲಿ ಈಚನಾಳ ಅವರು ಶಾಲು ಹಾಕಿ ಗದೆ ನೀಡಿ ಸತ್ಕರಿಸಿದರು.
ಬಳಿಕ ಶಾಸಕರು, ಎತ್ತಿನ ಬಂಡಿಯಲ್ಲಿ ನಿಂತು ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ್ ಕಾಲೇಜಿನ ಸಿಬ್ಬಂದಿ ಇದ್ದರು. ಮೆರವಣಿಗೆಯುದ್ದಕ್ಕೂ ವಿವಿಧ ವೇಷ ತೊಟ್ಟ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯವರು ಹಲಿಗೆ, ಡೊಳ್ಳುಗಳ ತಾಳಕ್ಕೆ ಹೆಜ್ಜೆ ಹಾಕಿದರು.
ನಂತರ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಧೀಂದ್ರ ವಕೀಲರು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಕಾರ್ಯಕ್ರಮ ಅತ್ಯಂತ ಸುಂದರವಾಗಿ, ಅಚ್ಚುಕಟ್ಟಾಗಿ ಮಾಡಲಾಗಿದೆ. ಮುಂದೆ ಯಾವುದೇ ಜಾನಪದ ಕಾರ್ಯಕ್ರಮ ನಡೆಸಿದರೆ ಸಹಕಾರ ನೀಡುವುದಾಗಿ ತಿಳಿಸಿದರು.
ಜಾನಪದ ಉತ್ಸವದ ಸಂಯೋಜಕರಾದ ಡಾ. ಖಾಜಾವಲಿ ಈಚನಾಳ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಲಕ್ಷ್ಮಣ ಭೋಸ್ಲೆ ಮಾತನಾಡುತ್ತ ಜಾನಪದ ಗೀತೆ ಹಾಡಿ ರಂಜಿಸಿದರು.
ಹಿರಿಯ ಪ್ರಾಧ್ಯಾಪಕರಾದ ಡಾ.ರಾಬಿಯಾ ಬೇಗಂ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ.ಶರಣಪ್ಪ ಸೈದಾಪುರ ಅತಿಥಿ ಪರಿಚಯ ಮಾಡಿದರು. ಡಾ.ಶರಣಪ್ಪ ಗುಂಡಗುರ್ತಿ, ಡಾ.ನಾಗರೆಡ್ಡಿ ಹಾಗೂ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಅಧ್ಯಾಪಕ ಭೀಮಣ್ಣ ನಿರೂಪಿಸಿದರು.
ವಿದ್ಯಾರ್ಥಿಗಳು ಜಾನಪದ ಹಾಡು, ನೃತ್ಯ, ಹಾಸ್ಯ, ಏಕಪಾತ್ರಾಭಿನಯ, ಪ್ರಸ್ತುತ ಪಡಿಸಿದರು. ಜನಪದ ಆಟಗಳಾದ ಗೋಲಿ, ಬುಗುರಿ, ಚಿನ್ನಿದಾಂಡು ಆಡಿ, ಗಾಳಿಪಟ ಹಾರಿಸಿದ ಖುಷಿ ಪಟ್ಟರು
ಗುಡಿಸಲು ನಿರ್ಮಿಸಿ, ಬಾಗಿಲಿಗೆ ಮಾವಿನೆಲೆ, ಚೆಂಡು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ತಂದ ಕೃಷಿ ಮತ್ತು ಮನೆಯಲ್ಲಿ ಬಳಸುವ ಸಾಂಪ್ರದಾಯಿಕ ವಸ್ತುಗಳ, ದೇಶಿ ಅಡುಗೆಯ ಸಿಹಿ ಮತ್ತು ಖಾರದ ಪದಾರ್ಥಗಳ ಪ್ರದರ್ಶನವೂ ನಡೆಯಿತು. ಕೊನೆಯಲ್ಲಿ ಸಜ್ಜಕ, ಬದ್ನೇಕಾಯಿ ಪಲ್ಯ, ಸಜ್ಜಿ ರೊಟ್ಟಿ, ಪುಂಡಿ ಪಲ್ಯ ಸೇಂಗಾ ಚಟ್ನಿ ಸವಿದು ಸಂತಸ ಪಟ್ಟರು.







