ಕಲಬುರಗಿ | ಆಹಾರ ಸುರಕ್ಷತೆ, ಪೂರೈಕೆಯ ಗುಣಮಟ್ಟದ ಕುರಿತು ಆಹಾರ ಆಯೋಗದಿಂದ ಪರಿಶೀಲನೆ : ಡಾ.ಹೆಚ್. ಕೃಷ್ಣ

ಕಲಬುರಗಿ : ಆಹಾರ ಭದ್ರತೆ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಆಯೋಗವು ಗುರುವಾರದಿಂದ 3 ದಿನಗಳ ಕಾಲ ಕಲಬುರಗಿಯಲ್ಲಿ ಪ್ರವಾಸ ಕೈಗೊಂಡಿದ್ದು, ಶಾಲಾ, ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಪೂರೈಕೆಯ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸದಸ್ಯರು ಪ್ರತಿ ತಾಲೂಕಿಗೆ ಭೇಟಿ ನೀಡಿ ಅನಿರೀಕ್ಷಿತವಾಗಿ ವಸತಿ ನಿಲಯ, ನ್ಯಾಯ ಬೆಲೆ ಅಂಗಡಿ, ಮಧ್ಯಾಹ್ನ ಬಿಸಿಯೂಟ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.
ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮತ್ತು ಸಾಗಾಟದ ಬಗ್ಗೆ ವ್ಯಾಪಕ ದೂರು ಬಂದಿವೆ. ಹೀಗಾಗಿ ಆಯೋಗ ಇದೆಲ್ಲದರ ಬಗ್ಗೆ ಪರಿಶೀಲನೆ ಮಾಡಲಿದೆ. ಗೋದಾಮುಗಳಿಗೆ ಹಠಾತ್ ಭೇಟಿ ನೀಡಲಿದೆ. ಅನ್ನ ಭಾಗ್ಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಏನೇ ಅಕ್ರಮ, ಲೋಪದೋಷಗಳಿದ್ದಲ್ಲಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇದರಿಂದ ಬಾಧಿತ ವ್ಯಕ್ತಿಗಳು ಆಯೋಗದ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ತಿಳಿಸಿದರು.
ತಾಲೂಕು ಪ್ರವಾಸ ಮುಗಿಸಿದ ನಂತರ ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆ ನಡೆಯಲಿದೆ. ಜಿಲ್ಲೆಯಲ್ಲಿ ಆಯೋಗಕ್ಕೆ ಕಂಡು ಬಂದ ನ್ಯೂನತೆಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಅಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಡಿಡಿಪಿಐ ಸುರ್ಯಕಾಂತ ಮದಾನೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







