ಮುಂಗಾರು ಹಂಗಾಮಿ ಬೀಜ ಮತ್ತು ರಸಗೊಬ್ಬರದ ವಿತರಣೆಗೆ ಉಸ್ತುವಾರಿ ತಂಡ ರಚನೆ: ಸಮದ್ ಪಟೇಲ್

ಕಲಬುರಗಿ: ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರವು ಸಕಾಲದಲ್ಲಿ ರೈತರಿಗೆ ದೊರಕಲು ಹಾಗೂ ಕೃತಕ ಅಭಾವ ಸೃಷ್ಠಿಸಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಗಟ್ಟಲು ಹಾಗೂ ಬೀಜ ಮತ್ತು ರಸಗೊಬ್ಬರದ ವಿತರಣೆಯನ್ನ ಉಸ್ತುವಾರಿ ಮಾಡಲು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಗೊಂಡಿರುವ 11 ತಂಡ ರಚನೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ತಿಳಿಸಿದ್ದಾರೆ.
ಕಲಬುರಗಿ ತಾಲೂಕುವಾರು ತಹಶಿಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಕೃಷಿ ಹಾಗೂ ಕೃಷಿ ಸಂಭಂದಿತ ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡ 11 ತಂಡಗಳನ್ನು ರಚಿಸಿದ್ದು ನಿಯಮಿತವಾಗಿ ತಂಡದವರು ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ಬೀಜ ಹಾಗೂ ರಸಗೊಬ್ಬರ ಸರ್ಕಾರ ನಿಗದಿಪಡಿಸಿದ ದರದಂತೆ ಲಭ್ಯವಾಗಲು ಹಾಗೂ ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲು ಆದೇಶಿಸಲಾಗಿದೆ.
ಈಗಾಗಲೇ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಬೀಜ ಹಾಗೂ ರಸಗೊಬ್ಬರ ಮಾರಾಟವನ್ನು ನಿಯಂತ್ರಿಸಲು ಕೃಷಿ ಸಂಜೀವಿನಿ ವಾಹನದಲ್ಲಿ ಸಂಚರಿಸಿ ರಸಗೊಬ್ಬರ ಹಾಗು ಬೀಜ ವಿತರಣೆ ನಿಂತ್ರಿಸಲಾಗುತ್ತಿದೆ. ಅದ್ದರಿಂದ ರೈತರಿಗೆ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಕೃಷಿ ಸಂಜೀವಿನಿ ವಾಹನದಲ್ಲಿರುವ ಅಧಿಕಾರಿಗಳಿಗೆ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಅಥವಾ ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಈ ದೂರವಾಣಿ ಸಂಖ್ಯೆ 8123679990 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಶೆ 90 ರಷ್ಟು ಬಿತ್ತನೆಯಾಗಿರುವುದು ವರದಿಯಾಗಿದ್ದು ಯಾವುದೇ ರೀತಿಯಾದ ಬೀಜ ಹಾಗೂ ರಸಗೊಬ್ಬರದ ಕೊರತೆ ಇರುವುದಿಲ್ಲ ಆದ್ದರಿಂದ ಜಿಲ್ಲೆಯ ಎಲ್ಲಾ ರೈತ ಬಾಂಧವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







