ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಕ್ರಮ ಕೈಗೊಳ್ಳಿ : ಮಾಜಿ ಸಚಿವ ವಿ.ಶ್ರೀನಿವಾಸಗೌಡ

ಕಲಬುರಗಿ: ಹಿಂದೆ ಹೈದರಾಬಾದ್ ಕರ್ನಾಟಕ ಎನಿಸಿಕೊಳ್ಳುತ್ತಿರುವ ಈಗಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮರೀಚಿಕೆಯಾಗಿವೆ, ಕೂಡಲೇ ಇಲ್ಲಿನ ಜನಪ್ರತಿನಿಧಿಗಳು ರಸ್ತೆ ಸುಧಾರಣೆ ಸೇರಿದಂತೆ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ತೆಲಂಗಾಣ ರಾಜ್ಯದ ಮಾಜಿ ಸಚಿವ ವಿ.ಶ್ರೀನಿವಾಸಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ತೆಲಂಗಾಣ ರಾಜ್ಯದ ಹೈದರಾಬಾದ್ ನಗರ ಸೇರಿದಂತೆ ಹಲವು ನಗರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿವೆ, ತಾಂತ್ರಿಕ ವಿಚಾರದಲ್ಲೂ ಪ್ರಸಿದ್ಧಿ ಪಡೆಯುತ್ತಿವೆ, ಆದರೆ ಹೈದರಾಬಾದ್ ಪ್ರಾಂತದಿಂದ ಕರ್ನಾಟಕಕ್ಕೆ ಸೇರ್ಪಡೆಯಾದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಸ್ತೆ, ಕೈಗಾರಿಕೆಗಳ ಸ್ಥಾಪನೆ, ಶಿಕ್ಷಕರ ನೇಮಕಾತಿ ಸೇರಿದಂತೆ ಉದ್ಯೋಗ ಒದಗಿಸುವಲ್ಲಿ ಇಲ್ಲಿನ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಈ ಭಾಗದ ಅಭಿವೃದ್ಧಿಗಾಗಿ ಹೋರಾಟ ನಡೆಸಿದರೆ ಖಂಡಿತ ನಾವು ಬೆಂಬಲಿಸುತ್ತೇವೆ. ನಮ್ಮ ಪಕ್ಕದಲ್ಲೇ ಇರುವ ತಮ್ಮ ಭಾಗದ ಅಭಿವೃದ್ಧಿಗೆ ನಾವು ಬೆಂಬಲವಾಗಿ ನಿಲ್ಲಲಿದ್ದೇವೆ. ಪ್ರತ್ಯೇಕ ರಾಜ್ಯದ ಹೋರಾಟ ನಡೆಸಿದರೂ ಬೆಂಬಲ ಕೊಡಲಿದ್ದೇವೆ. ಈ ಹೋರಾಟದಲ್ಲಿ ಕರೆದರೆ ಈ ಭಾಗದ ಜನರೊಂದಿಗೆ ಭಾಗಿಯಾಗುವುದಾಗಿ ಹೇಳಿದರು.
ಈ ಭಾಗದಲ್ಲಿ ಸಮರ್ಪಕ ರಸ್ತೆಗಳು, ಶಾಲಾ- ಕಾಲೇಜುಗಳು, ಕೈಗಾರಿಕೆ ಮತ್ತಿತ್ತರ ಉದ್ಯಮಗಳು ಬೆಳೆದಿಲ್ಲ. ಹೀಗಾಗಿ ಇಲ್ಲಿಯ ಜನರು ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಗೂಳೆ ಹೋಗುತ್ತಿದ್ದಾರೆ. ಕೂಡಲೇ ಈ ಭಾಗದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕು ಆಗ್ರಹಿಸಿದರು.
ತೆಲಂಗಾಣದಲ್ಲಿ ಪ್ರತ್ಯೇಕ ರಾಜ್ಯವಾದ ಬಳಿಕ ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿಸಿದ್ದೇವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ, ಹಾಗಾಗಿ ಇಂದು ಹೈದರಾಬಾದ್ ನಗರ ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ ಎಂದರು.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರಿಗಿಂತ ಹೆಚ್ಚು ಕಾಲ ಅಧಿಕಾರ ನಡೆಸಿದ್ದೇನೆಂದು ಹೇಳುವುದಕ್ಕಿಂತ ಹೆಚ್ಚು ಬಡವರ, ಹಿಂದುಳಿದವರ ಅಭಿವೃದ್ಧಿಯ ಕೆಲಸಗಳ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಲಿ ಎಂದು ಸವಾಲೆಸೆದರು.
ಈಡಿಗ ಸಮಾಜದ ಪ್ರಣವಾನಂದ ಸ್ವಾಮಿಜಿಗಳು ಹಮ್ಮಿಕೊಂಡಿರುವ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಲು ತಾವು ಇಲ್ಲಿಗೆ ಬಂದಿದ್ದು, ಕರ್ನಾಟಕ ಸರಕಾರ ವಿಧಾನ ಸೌಧದ ಎದುರು ನಾರಾಯಣ ಗುರುಗಳ ಮೂರ್ತಿ ಸ್ಥಾವನೆ ಮಾಡಬೇಕು, ಈಡಿಗ ನಿಗಮಕ್ಕೆ 500 ಕೋಟಿ ರೂಪಾಯಿ ನೀಡಬೇಕು, ಈಡಿಗ ಸಮುದಾಯದ ಕುಲಕಸುಬಾದ ಶೇಂದಿ ಮಾರಾಟ ಪ್ರಾರಂಭಿಸಬೇಕು, ತೆಲಂಗಾಣ ಮಾದರಿಯಲ್ಲಿ ಇಡಿಗರಿಗೆ ಸಹಾಯ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ವೆಂಕಟೇಶ ಕಡೆಚೂರ, ಚನ್ನು ಪಾಟೀಲ, ಸಂತೋಷ್ ಗುತ್ತೇದಾರ, ಸೇರಿದಂತೆ ಹಲವರಿದ್ದರು.







