ಕೆಬಿಎನ್ ವಿವಿಯಲ್ಲಿ ‘ಜೆನ್ಎಐ ಮತ್ತು ಸೇಲ್ಸ್ಫೋರ್ಸ್’ ಕಾರ್ಯಾಗಾರ

ಕಲಬುರಗಿ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ಲೌಡ್ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ (ಕೆಬಿಎನ್ಯು) ವಿಜ್ಞಾನ ನಿಕಾಯದ ಗಣಕವಿಜ್ಞಾನ ವಿಭಾಗದ ವತಿಯಿಂದ ‘ಜೆನ್ಎಐ ಮತ್ತು ಸೇಲ್ಸ್ಫೋರ್ಸ್ ರೆವೊಲ್ಯೂಷನ್’ ವಿಷಯದ ಕುರಿತು ಎರಡು ದಿನಗಳ ಪ್ರಾಯೋಗಿಕ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಕೆಬಿಎನ್ ವಿವಿಯ ಸಮ ಉಪಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹಮದ್ ಉದ್ಘಾಟಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಾಲೆಯ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಆರ್.ಎಸ್. ಹೆಗಡೆ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಅರ್ಲಿಗ್ ಟೆಕ್ನಾಲಜೀಸ್ನ ಸೇಲ್ಸ್ಫೋರ್ಸ್ ಡೆವಲಪರ್ಗಳಾದ ಮೊಹಮ್ಮದ್ ಕುತುಬುದ್ದೀನ್ ಬಿಲಾಲ್, ಮೊಹಮ್ಮದ್ ನೋಮನ್ ಹಾಗೂ ಕಲಬುರಗಿಯ ಇನ್ವಿಡಿಟ್ ಟೆಕ್ನಾಲಜೀಸ್ ಸಂಸ್ಥಾಪಕ ನಜೀರ್ಉಲ್ಲಾ ಹುಸೇನಿ ತಾಂತ್ರಿಕ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಜನರೇಟಿವ್ ಎಐನ ಮೂಲತತ್ವಗಳು, ಗ್ರಾಹಕ ಸಂಬಂಧ ನಿರ್ವಹಣೆ (ಸಿಆರ್ಎಂ), ಮಾರಾಟ, ಮಾರುಕಟ್ಟೆ ಮತ್ತು ಸೇವಾ ಕಾರ್ಯಾಚರಣೆಗಳ ಸುಧಾರಣೆಗೆ ಸೇಲ್ಸ್ಫೋರ್ಸ್ ವೇದಿಕೆಯೊಂದಿಗೆ ಎಐ ತಂತ್ರಜ್ಞಾನವನ್ನು ಸಂಯೋಜಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಕಲಬುರಗಿಯ ವಿವಿಧ ಕಾಲೇಜುಗಳ 150 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಾಗಾರದ ಸಂಯೋಜಕಿ ಡಾ. ಆಶಾಲತಾ ಆರ್. ಸ್ವಾಗತಿಸಿದರು. ಡಾ. ಅಹೆಲಮ್ ತಿಕೋಟಿಕರ್ ಹಾಗೂ ಶಿರೀನ್ ಸುಲ್ತಾನ ನಿರೂಪಿಸಿದರು.






