ಕಲಬುರಗಿಯ ‘ಪಿಎಂ ಮಿತ್ರ ಜವಳಿ ಪಾರ್ಕ್’ ಕಾಮಗಾರಿಗೆ ವೇಗ ನೀಡಲು ಸರಕಾರ ತೀರ್ಮಾನ

ಬೆಂಗಳೂರು/ಕಲಬುರಗಿ : ಮುಖ್ಯಮಂತ್ರಿಗಳು ಈ ಬಾರಿಯ ಆಯವ್ಯಯದಲ್ಲಿ ಘೋಷಿಸಿರುವ ಮಹತ್ವಾಕಾಂಕ್ಷಿ ‘ಪಿಎಂ ಮಿತ್ರ ಜವಳಿ ಪಾರ್ಕ್’ (PM MITRA Park) ಯೋಜನೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಘೋಯಲ್ ಚೌಧರಿ, ಜವಳಿ ಇಲಾಖೆಯ ಆಯುಕ್ತ ಕೆ.ಬಿ. ಬಸವರಾಜ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಕಲಬುರಗಿ ಪಾರ್ಕ್‌ನ ಬಾಹ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಒಳಗೊಂಡಂತೆ ಸಮಗ್ರ ಯೋಜನಾ ವರದಿ (DPR) ಯನ್ನು ತಕ್ಷಣ ಪರಿಷ್ಕರಿಸಿ, ಭಾರತ ಸರ್ಕಾರದ ಯೋಜನಾ ಅನುಮೋದನಾ ಸಮಿತಿ (PAC) ಗೆ ಸಲ್ಲಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಮೂಲಕ ಪಾರ್ಕ್‌ನ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮೊದಲ ಹಂತದ ಅನುಷ್ಠಾನದ ಬಳಿಕ ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ಪ್ರಮಾಣದ ಆಧಾರದ ಮೇಲೆ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ‘ಅಭಿವೃದ್ಧಿ ಬಂಡವಾಳ ಬೆಂಬಲ’ (DCS) ಯೋಜನೆಯಡಿ ಒಟ್ಟು ಯೋಜನಾ ವೆಚ್ಚದ ಶೇ.30ರಷ್ಟು, ಗರಿಷ್ಠ 500 ಕೋಟಿ ರೂ. ತನಕ ಧನಸಹಾಯ ಲಭ್ಯವಾಗಲಿದೆ. ಈ ಅನುದಾನವನ್ನು ರಸ್ತೆ, ನೀರು, ವಿದ್ಯುತ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ (CETP), ವಸತಿ ನಿಲಯ ಸೇರಿದಂತೆ ಪಾರ್ಕ್‌ನ ಆಂತರಿಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
25 ಕೋಟಿ ರೂ. ಬಿಡುಗಡೆಗೆ ಸೂಚನೆ :
ಕಲಬುರಗಿ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಮತ್ತು ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಈ ಬೃಹತ್ ಜವಳಿ ಪಾರ್ಕ್ ಯೋಜನೆಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡಲು ರಾಜ್ಯ ಅನುಷ್ಠಾನ ಸಂಸ್ಥೆಯು ಕನಿಷ್ಠ 25 ಕೋಟಿ ರೂ. ಮೊತ್ತವನ್ನು ಭೌತಿಕ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






