ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟ: ಗುರುನಾಥ ಪೂಜಾರಿ

ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆ ಬದಲಾವಣೆಯಾಗಲಿದೆ ಎನ್ನುವ ಚರ್ಚೆಗಳಿಗೆ ನಡೆಯುತ್ತಿವೆ. ಒಂದು ವೇಳೆ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯಾದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುರುನಾಥ ಪೂಜಾರಿ, 2023ರ ವಿಧಾನ ಸಭೆ ಚುನಾವಣೆಯಲ್ಲಿ ಶೇ.70 ರಿಂದ 80ರಷ್ಟು ಅಹಿಂದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವಂತೆ ಮಾಡಿದೆ. ಆದರೆ ಮುಖ್ಯಮಂತ್ರಿ ಆಯ್ಕೆ ಮಾಡುವ ಸಂದರ್ಭದಲ್ಲಿ 30 ತಿಂಗಳ ಅವಧಿಗೆ ಎಂದು ಹೈಕಮಾಂಡ್ ಯಾರಿಗೂ ತಿಳಿಸಿಲ್ಲ, ಹಾಗಾಗಿ ಇನ್ಮುಂದೆ ಉಳಿದ ಕಾಲಾವಧಿಗೂ ಸಿದ್ದರಾಮಯ್ಯರನ್ನೇ ಸಿಎಂ ಎಂದು ಹೈಕಮಾಂಡ್ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಎರಡೂವರೆ ವರ್ಷದ ಬಳಿಕ ಈಗ ಸಿಎಂ ಬದಲಾವಣೆ ಕೂಗು ಬರುತ್ತಿರುವುದು ಸರಿಯಲ್ಲ, ಚುನಾವಣೆಗಿಂತ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಗಾಗಿ ಅಂತಹ ಅಭಿವೃದ್ಧಿಪರ ನಾಯಕರನ್ನು ಸಂಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಂದ್ರಪ್ಪ ಪೂಜಾರಿ, ಲಕ್ಷ್ಮಣ ನಂದಿಕೂರ್ ಉಪಸ್ಥಿತರಿದ್ದರು.





