ಸೌಹಾರ್ದಯುತ ಸೇವೆಯಿಂದ ಸಾಮರಸ್ಯ ಉಗಮ: ಹಾರಕೂಡ ಶ್ರೀ

ಕಾಳಗಿ: ತಮಗೆ ದೊರೆತ ಅಧಿಕಾರವನ್ನು ಸೌಹಾರ್ದಯುತ ಸೇವೆಯನ್ನಾಗಿ ಮಾರ್ಪಡಿಸಿಕೊಂಡಾಗ ಸಮಾಜದಲ್ಲಿ ಸಾಮರಸ್ಯ ಉಗಮಿಸಿ ಬಂಧುತ್ವದ ಫಸಲು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಚನ್ನಬಸವೇಶ್ವರ ಹಿರೇಮಠದಲ್ಲಿ ಕಾಳಗಿ ಪಟ್ಟಣ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಸನ್ಮಾನ ಮತ್ತು ಆಶಿರ್ವಾದ ಸಮಾರಂಭವನ್ನು ಉದ್ದೇಶಿಸಿ ಅವರು ಆಶಿರ್ವಚನ ನೀಡಿದರು.
ತ್ಯಾಗ ಮತ್ತು ಸೇವೆಯ ಆದರ್ಶದಿಂದ ಕೂಡಿದ ಅಧಿಕಾರ ಜನರ ಹೃದಯವನ್ನು ಗೆಲ್ಲುತ್ತದೆ. ಸ್ವಾರ್ಥವಿಲ್ಲದ ನಿಷ್ಪಕ್ಷಪಾತ ಜನಸೇವೆಯಿಂದ ಅಧಿಕಾರದ ಮೌಲ್ಯ ಹಾಗೂ ನಾಯಕತ್ವದ ದೃಢತೆ ಹೆಚ್ಚುತ್ತದೆ. ಸೇವೆಯೇ ಧರ್ಮವೆಂದರಿತು ಮುನ್ನಡೆದವರಿಗೆ ಭಗವಂತನ ಕೃಪೆಯಾಗುವುದು ಖಂಡಿತವೆಂದು ಹೇಳಿದ ಶ್ರೀಗಳು, ನೂತನ ಪದಾಧಿಕಾರಿಗಳ ಅಧಿಕಾರವಧಿಯಲ್ಲಿ ಕಾಳಗಿ ಪಟ್ಟಣ ಸರ್ವಾಂಗೀಣ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿ ಆಶಿರ್ವದಿಸಿದರು.
ಜಿಪಂ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ ಮಾತನಾಡಿ, ಸರ್ವ ಧರ್ಮ ಸಮನ್ವಯ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿರುವ ಹಾರಕೂಡ ಪೂಜ್ಯರ ಆಶಿರ್ವಾದಿಂದಲೇ ಕಾಳಗಿ ಪಪಂ ಅಧಿಕಾರ ಪಡೆದುಕೊಂಡಿದ್ದು ಕಾಳಗಿ ಜನರ ಆಶಯದಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಹಿರಿಯರಾದ ಮೊಹಮ್ಮದ್ ಗುಡುಸಾಬ ಕಮಲಾಪೂರ, ಕಾಳಗಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆ ಸಾಲಿಯಾಬೇಗಂ ಬಿಜಾಪುರ, ಉಪಾಧ್ಯಕ್ಷ ಶರಣಪ್ಪ ಬೇಲೂರ ಹಾಗೂ ಸದಸ್ಯರನ್ನು ಹಾರಕೂಡ ಶ್ರೀಗಳು ಸನ್ಮಾನಿಸಿ ಆಶಿರ್ವಾದಿಸಿದರು.
ಪಪಂ ನೂತನ ಅಧ್ಯಕ್ಷ ಸಾಲಿಯಾಬೇಗಂ ಬಿಜಾಪುರ, ಉಪಾಧ್ಯಕ್ಷ ಶರಣು ಬೆಲೂರ, ಪ್ರಮುಖರಾದ ಮಲ್ಲಿನಾಥ ಹಿರೇಮಠ, ಇಬ್ರಾಹಿಂ ಪಾಷಾ ಗಿರಣಿಕರ್, ಅಸ್ಲಾಂಬೇಗ್ ಬಿಜಾಪುರ, ಮುನೀರಬೇಗ್ ಬಿಜಾಪುರ, ಮುರ್ತುಜ್ ಶಹಾ ದರ್ವೇಶ್, ಮೋದಿನಸಾಬ ಗೌಂಡಿ, ಮಸ್ತಾನಸಾಬ ಕೊರವಿ, ಸತೀಶ್ ಕಮಲಾಪೂರ, ಪಪಂ ಸದಸ್ಯ ಬಸವರಾಜ ಮಡಿವಾಳ, ಗುರುರಾಜ ಮದ್ದೂರ, ವೇದಪ್ರಕಾಶ ಮೊಟಗಿ, ಪರಮೇಶ್ವರ ಮಡಿವಾಳ, ಸಂತೋಷ ನರನಾಳ, ಮುಕ್ತಾರ ಕಲಗುರ್ತಿ, ಆರೀಫ್ ಬಿಜಾಪುರ ಸೇರಿದಂತೆ ಅನೇಕರು ಇದ್ದರು.
ಕಾಳಗಿ ಪಪಂ.ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭವು ಸೋಮವಾರ ಬೆಳಿಗ್ಗೆ10.30ಕ್ಕೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನೆರವೇರಲಿದೆ ಎಂದು ಪಪಂ ಮುಖ್ಯಾಧಿಕಾರಿ ಸಿದ್ಧರಾಮೇಶ್ವರ ಶಾಖಾಪೂರ ತಿಳಿಸಿದರು.






