ಗಾಳಿ ವಿದ್ಯುತ್ ಯೋಜನೆಗಳ ಭೂ ಒಪ್ಪಂದಗಳ ಸಮಗ್ರ ತನಿಖೆಗೆ ಹರ್ಷಾ ಗುತ್ತೇದಾರ ಆಗ್ರಹ

ಬೆಂಗಳೂರು: ಗಾಳಿ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ಭೂ ಒಪ್ಪಂದಗಳ ನೋಂದಣಿ ಪ್ರಕ್ರಿಯೆಯನ್ನು ಸಮಗ್ರವಾಗಿ ತನಿಖೆ ನಡೆಸಿ, ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಏಕರೂಪ ಹಾಗೂ ರೈತ ಸ್ನೇಹಿ ನೋಂದಣಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್. ಗುತ್ತೇದಾರ ಆಗ್ರಹಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾನಿರೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಗಾಳಿ ವಿದ್ಯುತ್ ಯೋಜನೆಗಳಿಗಾಗಿ ಕೆಲವು ಖಾಸಗಿ ಕಂಪನಿಗಳು, ವಿಶೇಷವಾಗಿ ಬ್ಲೂ ಪೈನ್ ಎನರ್ಜಿ ಲಿಮಿಟೆಡ್, ರೈತರೊಂದಿಗೆ ಮಾಡಿಕೊಂಡಿರುವ ಭೂ ಒಪ್ಪಂದಗಳ ನೋಂದಣಿ ವಿಧಾನದಿಂದ ಸಾವಿರಾರು ರೈತರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.
ಪ್ರಸ್ತುತ ಕಂಪನಿಯು ಭೂ ಒಪ್ಪಂದಗಳನ್ನು Book-1 ಅಡಿಯಲ್ಲಿ ನೋಂದಣಿ ಮಾಡಿಸುತ್ತಿದ್ದು, ಇದರಿಂದ ರೈತರಿಗೆ ಇ-ಖಾತೆ ದಾಖಲೆ, ಬ್ಯಾಂಕ್ ಸಾಲ, ಬೆಳೆ ವಿಮೆ, ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವುದು ಹಾಗೂ ಭವಿಷ್ಯದ ಭೂ ವ್ಯವಹಾರಗಳಲ್ಲಿ ಅನಗತ್ಯ ತೊಂದರೆಗಳು ಎದುರಾಗುತ್ತಿವೆ ಎಂದು ರೈತರು ದೂರು ನೀಡಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಸುಜ್ಞಾನ ಎನರ್ಜಿ ಸಂಸ್ಥೆಯು ಗಾಳಿ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ದಾರಿಹಕ್ಕು ಹಾಗೂ ವೈಮಾನಿಕ ಹಕ್ಕುಗಳ Easement ಒಪ್ಪಂದಗಳನ್ನು Book-4 ಅಡಿಯಲ್ಲಿ ನೋಂದಣಿ ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಈ ವಿಧಾನ ಕಾನೂನುಬದ್ಧವಾಗಿದ್ದರೆ, ಅದನ್ನೇ ರಾಜ್ಯಾದ್ಯಂತ ರೈತ ಸ್ನೇಹಿ ಮಾದರಿಯಾಗಿ ಜಾರಿಗೊಳಿಸಬೇಕು ಎಂದು ಹರ್ಷಾ ಗುತ್ತೇದಾರ ಒತ್ತಾಯಿಸಿದ್ದಾರೆ.






