ಭೀಮಾ ನದಿಗೆ ಮಹಾರಾಷ್ಟ್ರದಿಂದ 3.45 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ | ಪ್ರವಾಹ ಭೀತಿಯಿಂದಾಗಿ ಎರಡು ದಿನ ಕಟ್ಟೆಚ್ಚರ : ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಫಜಲ್‌ಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
3.45 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ :
ಮಹಾರಾಷ್ಟ್ರದ ಉಜ್ಜಿನಿ, ಸಿನಾ, ವಿರಾ ಜಲಾಶಯಗಳು ಹಾಗೂ ಭೋರಿ ಹಳ್ಳದಿಂದ ಒಟ್ಟು 3.50 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆಗೊಂಡಿದ್ದು, ಅಫಜಲ್‌ಪುರ ತಾಲೂಕಿನ ಸೊನ್ನ ಬ್ಯಾರೇಜ್ ಮೂಲಕ 3.45 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿಯುತ್ತಿದೆ. ಪರಿಣಾಮವಾಗಿ ಜಿಲ್ಲೆಯ 36 ಗ್ರಾಮಗಳು ಪ್ರವಾಹಕ್ಕೊಳಗಾಗಿವೆ.
ಅಫಜಲ್‌ಪುರ ತಾಲೂಕಿನ 17, ಜೇವರ್ಗಿ 8, ಕಲಬುರಗಿ ಹಾಗೂ ಚಿತ್ತಾಪುರ ತಲಾ 5 ಗ್ರಾಮಗಳು ಪೀಡಿತವಾಗಿದ್ದು, 12 ಕಾಳಜಿ ಕೇಂದ್ರಗಳನ್ನು ತೆರೆದು 1,436 ಜನರಿಗೆ ವಾಸ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆ :
ಜನವರಿ 2025ರಿಂದ ಸೆಪ್ಟೆಂಬರ್ 25ರವರೆಗೆ ಜಿಲ್ಲೆಯಲ್ಲಿ 901 ಮಿಮೀ ಮಳೆಯಾಗಿ ಸಾಮಾನ್ಯ ಮಳೆಯಿಗಿಂತ ಶೇ 47ರಷ್ಟು ಹೆಚ್ಚಾಗಿದೆ. ಕಳೆದ ವಾರ ಮಾತ್ರವೇ ಶೇ 85 ಹೆಚ್ಚುವರಿ ಮಳೆಯಾಗಿದೆ. ಇದರಿಂದ ತೊಗರಿ, ಉದ್ದು, ಹತ್ತಿ, ಹೆಸರು ಸೇರಿದಂತೆ ಪ್ರಮುಖ ಬೆಳೆಗಳು ಹಾನಿಗೊಳಗಾಗಿವೆ ಎಂದು ಸಚಿವರು ವಿವರಿಸಿದರು.
ಪುನರ್ ವಸತಿ ಬೇಡಿಕೆ ಪರಿಶೀಲನೆ :
ನದಿ ತೀರದ ಕೆಲವು ಗ್ರಾಮಗಳಲ್ಲಿ ಪುನರ್ವಸತಿ ಬೇಡಿಕೆ ವ್ಯಕ್ತವಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಹಾರ ಪದಾರ್ಥ ಗಳ ಕಿಟ್ ವಿತರಣೆ :
ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ 2,500 ಆಹಾರ ಕಿಟ್‌ಗಳನ್ನು ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಜಿಲ್ಲಾಡಳಿತದ ಮೂಲಕ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪರಿಹಾರ ತಂಡ ನಿಯೋಜನೆ:
ಪ್ರವಾಹ ನಿರ್ವಹಣೆಗೆ 20 ಅಧಿಕಾರಿಗಳನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡವನ್ನು ದೇವಲಗಾಂವಾಪುರದಲ್ಲಿ ನಿಯೋಜಿಸಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತುರ್ತು ಕಾರ್ಯಚರಣೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಅಂದಾಜಿಸಲಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ 90% ಮುಗಿದಿದ್ದು, ಪೂರ್ಣಗೊಂಡ ನಂತರ ಪರಿಹಾರ ಒದಗಿಸಲಾಗುವುದು ಎಂದರು.
2024-25ನೇ ಸಾಲಿನಲ್ಲಿ ಮಾತ್ರ 8.91 ಲಕ್ಷ ರೈತರಿಗೆ 1,417 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಈ ವರ್ಷವೂ ಪರಿಹಾರ ತ್ವರಿತವಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಕೇವಲ ರಾಜಕೀಯ ಮಾಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಹಿತಕ್ಕಾಗಿ ಕ್ರಮ ಕೈಗೊಳ್ಳುತ್ತಿದೆ. ನಾನು ಬಿಜೆಪಿಗೆ ಉತ್ತರದಾಯಿ ಅಲ್ಲ, ಜನತೆಗೆ ಮಾತ್ರ ಉತ್ತರದಾಯಿಯಾಗಿರುತ್ತೇನೆ ಎಂದು ಖರ್ಗೆ ಸ್ಪಷ್ಟಪಡಿಸಿದರು.







