ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆ ಪ್ರತಿಭಟನೆ

ಅಫಜಲಪುರ: ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕುಂಠಿತಗೊಂಡಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಫಜಲಪುರ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದರಾಮ ದಣ್ಣೂರ, ತಾಲೂಕು ಅಧ್ಯಕ್ಷ ಸಂತೋಷ ಮಲಗೊಂಡ, ತಾಲೂಕು ಕಾರ್ಯದರ್ಶಿ ಅಶೋಕ ಹೂಗಾರ ಹಾಗೂ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಮುಂಗಾರು ಬಿತ್ತನೆಗೂ ರೈತರು ನೀರಿನ ಅಭಾವದಿಂದ ಪರದಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ರಾಜ್ಯದ ಪಾಲಿನ 15 ಟಿಎಂಸಿ ನೀರನ್ನು ಬಿಡುಗಡೆ ಮಾಡಿಸಿ, ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ತಕ್ಷಣ ನೀರು ಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ದೇವಲಗಾಣಗಾಪುರ ಕ್ಷೇತ್ರಕ್ಕೆ ಕುಡಿಯುವ ನೀರು ಹಾಗೂ ಭಕ್ತರ ಸ್ನಾನಕ್ಕೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಾನುವಾರುಗಳ ರಕ್ಷಣೆಗೆ ಗೋಶಾಲೆಗಳನ್ನು ಆರಂಭಿಸಬೇಕು. ವಯೋವೃದ್ಧರು, ಅಂಗವಿಕಲರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಬಾಕಿ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ಮುಂಗಾರು ಬಿತ್ತನೆಗೆ ವಿಶೇಷ ನೆರವು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಸಂಜೀವಕುಮಾರ ದಾಸರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಂಕರ ಮ್ಯಾಕೇರಿ, ರಮೇಶ್ ಹೂಗಾರ, ಆನಂದ ದೇಸಾಯಿ, ಬಸವರಾಜ ಚಾಂದಕವಟೆ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ತಾಫ್ ಇನಾಮದಾರ್, ಶರಣಗೌಡ ಪಾಟೀಲ, ಶ್ರೀಕಾಂತ ದಿವಾಣಜಿ, ಮಹಾಂತೇಶ ಜಮಾದಾರ, ಶ್ರೀಶೈಲ್ ಗೋಳೆ, ರಾಜು ಬಡದಾಳ, ಪ್ರಿಯಾಂಕಾ, ಹಣಮಂತ ಆನೂರ, ಹಸನ್ ಮುಲ್ಲಾ, ನಿಂಗಪ್ಪ ಮ್ಯಾಕೇರಿ, ದೇಸಾಯಿ ಕಲ್ಲೂರ, ಶರಣಬಸಪ್ಪ ಮ್ಯಾಕೇರಿ, ಮೈಬೂಬ್ ನದಾಫ್ ಸೇರಿದಂತೆ ಅನೇಕ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






