ಕಬ್ಬಿಗೆ ಟನ್‌ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ ಚೌಡಾಪುರದಲ್ಲಿ ಹೆದ್ದಾರಿ ಬಂದ್ : ಸಾರ್ವಜನಿಕರ ಪರದಾಟ

ಕಲಬುರಗಿ: ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪ ಪೂಜಾರಿ ಬಣದ ಕಾರ್ಯಕರ್ತರು ಅಫಜಲಪುರ ತಾಲ್ಲೂಕಿನ ಚೌಡಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಹೆದ್ದಾರಿಯಲ್ಲಿ ಟೆಂಟ್ ಹಾಕಿ, ಎತ್ತಿನ ಬಂಡಿಗಳು ಹಾಗೂ ಟ್ರ್ಯಾಕ್ಟರ್ ಟ್ರಾಲಿಗಳನ್ನು ನಿಲ್ಲಿಸಿ ಧರಣಿ ನಡೆಸಿದ ರೈತರು, ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಂತೋಷ ಮಲಗೊಂಡ, ಕಳೆದ ಮೂರು ದಿನಗಳಿಂದ ರಸ್ತೆ ಬದಿಯಲ್ಲಿ ಕುಳಿತು ಹೋರಾಟ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಕಾರ್ಯಾಧ್ಯಕ್ಷ ಸಿದ್ದು ದಣ್ಣೂರ ಮಾತನಾಡಿ, ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪ್ರತಿ ಟನ್‌ಗೆ 5,500 ರೂ.ಏಕರೂಪ ಬೆಲೆ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು. ಇಲ್ಲವಾದರೆ ಕಾರ್ಖಾನೆಗಳ ಕಾರ್ಯಾರಂಭಕ್ಕೂ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರೈತರ ರಸ್ತೆ ಬಂದ್ ಹಾಗೂ ಪ್ರತಿಭಟನೆಯಿಂದ ಚೌಡಾಪುರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು. ಸ್ಥಳದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ರೈತರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂಬ ಆಗ್ರಹ ಪ್ರತಿಭಟನೆಯಲ್ಲಿ ಕೇಳಿಬಂತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದರಾಮ ಧಣ್ಣೂರ್, ತಾಲ್ಲೂಕು ಅಧ್ಯಕ್ಷ ಸಂತೋಷ್ ಜಿ. ಮಲಗೊಂಡ, ಅಶೋಕ್ ಹೂಗಾರ, ಶರಣಗೌಡ ಪಾಟೀಲ, ಕಾಸಿಂ ಹಳ್ಯಾಳ, ರಾಜು ಶೇಟ್ಟಿ, ರಾಘು ಸ್ವಾಮಿ, ಹರೀಶ್ ಸಾಸನೇಕರ, ಸುಭಾಷ್ ಲಿಂಗ ಶೆಟ್ಟಿ, ವಿಜಯ್ ಕುಮಾರ, ಸಾಯಿಬಣ್ಣ ಜಮಾದಾರ, ರಮೇಶ್ ಯಲಪ್ಪ, ಮಲ್ಕಪ್ಪ ಗೌಡ ಪಾಟೀಲ, ಅಣ್ಣಾರಾವ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.






