ಹಿಂದೂ-ಮುಸ್ಲಿಂ ಸಮುದಾಯಗಳು ದೇಶದ ಎರಡು ಕಣ್ಣುಗಳಿದ್ದಂತೆ: ಡಾ. ನಿರಂಜನ್ ನಿಷ್ಠಿ

ಕಲಬುರಗಿ: ನಗರದ ಸಂಗತ್ರಾಸವಾಡಿಯಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ "ಈದ್ ಮಿಲನ್" ಸಮಾರಂಭ ಹಾಗೂ ನಿವೃತ್ತ ಇಂಜಿನಿಯರ್ ಅಬ್ದುಲ್ ಖಾದರ್ ರಚಿಸಿದ ‘ಅರಿವಿನ ಬೆಳಕು’ ಎಂಬ ಪುಸ್ತಕವನ್ನು ರವಿವಾರ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ನಿರಂಜನ್ ನಿಷ್ಠಿ, ಹಿಂದೂ-ಮುಸ್ಲಿಂ ಸಮುದಾಯಗಳು ದೇಶದ ಎರಡು ಕಣ್ಣುಗಳಂತಿವೆ. ದೇಶದ ಅಭಿವೃದ್ಧಿಗೆ ಏಕತೆ, ಸೌಹಾರ್ದತೆ ಮತ್ತು ಭಾವೈಕ್ಯತೆ ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪ್ರಸ್ತುತ ಜಗತ್ತಿನಲ್ಲಿ ಪರಸ್ಪರ ಸಹೋದರತ್ವದ ಮನೋಭಾವನೆ ಕಾಪಾಡಿಕೊಳ್ಳುವ ಅಗತ್ಯವಿದೆ. ಹಣ, ಭದ್ರತೆ, ಅಹಂನಿಂದಾಗಿ ಒಂದು ದೇಶ ಇನ್ನೊಂದು ದೇಶದ ವಿರುದ್ಧ ಯುದ್ಧ ಸಾರುತ್ತಿರುವುದು ನಿಜಕ್ಕೂ ಕಳವಳಕಾರಿ ಎಂದು ಹೇಳಿದರು.
ಭಾರತದ ದೇಶ ಇಲ್ಲಿಯವರೆಗೆ ಇಷ್ಟೊಂದು ಬಲಿಷ್ಠ ದೇಶವಾಗಿ ಹೊರಹೊಮ್ಮಿದೆ ಎಂದರೆ ಯಾವುದೇ ರಾಜಕೀಯ ಪಕ್ಷಗಳಿಂದಲ್ಲ, ಹಿಂದೂ, ಮುಸ್ಲಿಂ ಇತರೆ ಧರ್ಮದ ಜನರ ಒಗ್ಗಟ್ಟಿನ ಶ್ರಮದಿಂದಾಗಿ ಅಭಿವೃದ್ಧಿಯಾಗಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಪ್ರಗತಿಗೆ ಕೃತಕ ಬುದ್ಧಿಮತ್ತೆ, ಆರ್ಥಿಕ ಪ್ರಗತಿ, ಸೇನಾ ಭದ್ರತೆ ಮತ್ತು ಸಮೃದ್ಧಿಯ ಅಗತ್ಯವಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಇಸಾಕ್ ಪುತ್ತೂರು ಮಾತನಾಡಿ, ಭಾರತವು ವಿವಿಧ ಧರ್ಮಗಳ ಜನರ ದೇಶವಾಗಿದ್ದು, ಇಲ್ಲಿ ಆಚರಿಸುವ ಹಬ್ಬಗಳೆಲ್ಲವೂ ಸಂತೋಷ ಮತ್ತು ಮಾನವೀಯತೆಯ ಪ್ರತೀಕವಾಗಿವೆ ಎಂದರು.
ಇಸ್ಲಾಂ ಧರ್ಮದಲ್ಲಿ ರಮಝಾನ್ ಮಾಸದಲ್ಲಿನ ಉಪವಾಸವು ದೇಹವನ್ನು ಕಷ್ಟಪಡಿಸುವುದಕ್ಕಲ್ಲ, ಸ್ವನಿಯಂತ್ರಣ ಮತ್ತು ಧರ್ಮನಿಷ್ಠೆಯನ್ನು ಬೆಳೆಸುವುದಕ್ಕಾಗಿ ಕಡ್ಡಾಯಗೊಳಿಸಲಾಗಿದೆ. ಒಬ್ಬ ಧರ್ಮ ನಿಷ್ಠೆವುಳ್ಳವನು ಮತ್ತೊಂದು ಧರ್ಮಕ್ಕೆ ಗೌರವಿಸುತ್ತಾನೆ. ಒಂದು ವೇಳೆ ಅನ್ಯ ಧರ್ಮದ ಬಗ್ಗೆ ಕೋಮುವಾದಿ ಹೊಂದಿದರೆ ಆತ ಎಂದಿಗೂ ಮುಸಲ್ಮಾನ ಆಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಕೋಪ ನಿಯಂತ್ರಣ, ಸಹನೆ, ಸದುಪಯೋಗಿ ಮಾತು ಮತ್ತು ಉತ್ತಮ ಹವ್ಯಾಸಗಳನ್ನು ಬೆಳೆಸುವ ಅಗತ್ಯವಿದೆ. ಆದರೆ ಮನುಷ್ಯ ಇಂದು ಪ್ರಕೃತಿಯ ವಿರುದ್ಧ ಸಾಗುತ್ತಿದ್ದಾನೆ. ಸಹನೆಯ ಗುಣಗಳನ್ನು ಅನುಸರಿಸಿದಾಗ ಮಾತ್ರ ಕುಟುಂಬ ನೆಮ್ಮದಿಯಿಂದ ಇರುತ್ತದೆ; ಶಾಂತಿಯೂ ಕೂಡ ನೆಲೆಯೂರುತ್ತದೆ ಎಂದರು.
ಮನುಷ್ಯ ಜೀವನದಲ್ಲಿ ದಯೆ, ನಿಷ್ಠೆ ಮತ್ತು ಸತ್ಕರ್ಮಗಳಿಗೆ ಮಹತ್ವ ನೀಡಬೇಕು. ಪಾಲಕರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದ ಅವರು, ಧರ್ಮ, ಜಾತಿ ಬೇಧವಿಲ್ಲದೆ ಪರಸ್ಪರ ಸಹಾಯ ಮಾಡಬೇಕು ಹಾಗೂ ನೆರೆಹೊರೆಯವರೊಂದಿಗೆ ಸದ್ಭಾವನೆಯಿಂದ ಬದುಕಬೇಕು ಎಂದು ಹೇಳಿದರು.
ಈದುಲ್ ಫಿತ್ರ್ ಹಬ್ಬವು ಜನರ ನಡುವೆ ಪ್ರೀತಿ, ಸಹಾನುಭೂತಿ ಮತ್ತು ಸದ್ವಿಚಾರಗಳನ್ನು ಹಂಚಿಕೊಳ್ಳುವ ಸಂದೇಶ ನೀಡುತ್ತದೆ ಎಂದರು.
ಪುಸ್ತಕದ ಲೇಖಕ ಅಬ್ದುಲ್ ಖಾದರ್ ಮಾತನಾಡಿ, ಪವಿತ್ರ ಕುರಾನ್‌ನಲ್ಲಿರುವ ಮಾನವೀಯ ಮೌಲ್ಯಗಳು, ಸೃಷ್ಟಿಕರ್ತನ ಅರಿವು, ಸತ್ಕರ್ಮಗಳು, ಕುಟುಂಬ ಮತ್ತು ಸಮಾಜದ ಹೊಣೆಗಾರಿಕೆಗಳ ಕುರಿತು ಸರಳವಾಗಿ ವಿವರಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ನಗರ ಅಧ್ಯಕ್ಷ ಝಾಕೀರ್ ಹುಸೈನ್ ಮಾತನಾಡಿ, ದೇಶದಲ್ಲಿ ಹರಡುತ್ತಿರುವ ದ್ವೇಷವನ್ನು ಪ್ರೀತಿಯಿಂದ ನಿವಾರಿಸಬೇಕಿದೆ ಎಂದರು. ಎಲ್ಲ ಧರ್ಮಗಳ ಜನರು ಸಹೋದರತ್ವದಿಂದ ಬದುಕಬೇಕು. ಅನೈತಿಕ ಚಟುವಟಿಕೆಗಳಿಗೆ ಪ್ರೇರಿಸುತ್ತಿರುವ ಸರಕಾರದ ವಿರುದ್ಧ ಜನರು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಲಬುರಗಿ ಉತ್ತರ ಅಧ್ಯಕ್ಷ ಕಲೀಮ್ ಅಬಿದ ಸ್ವಾಗತಿಸಿದರು. ಸಂಶುದ್ದೀನ್ ನಿರೂಪಿಸಿದರು. ಶಿಕ್ಷಕ ರಫೀಕ್ ಅಹ್ಮದ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮತ್ತು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.






