ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಸಿಎಂ ಬಳಿ ಚರ್ಚಿಸಲಿ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಅವರು ಹಿರಿಯರು, ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ ಸಿಎಂ, ಡಿಸಿಎಂ ಹಾಗೂ ಎಐಸಿಸಿ ಅಧ್ಯಕ್ಷರ ಬಳಿ ಚರ್ಚಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ಅವರು ಹಿರಿಯರು. ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಸೂಕ್ತವಾದ ವೇದಿಕೆಯಲ್ಲಿ ಹಿರಿಯರೊಂದಿಗೆ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗುತ್ತದೆ ಎಂದು ಹೇಳಿದರು.
ಫೋನ್ ನಲ್ಲಿ ನಡೆದ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು. ಈಗ ಸಿಎಂ ಅವರು ಬಿ.ಆರ್.ಪಾಟೀಲ್ ಅವರನ್ನು ಕರೆದಿದ್ದಾರೆ ಅಲ್ಲಿ ಏನು ಚರ್ಚೆ ನಡೆಯುತ್ತದೆಯೋ ಕಾದು ನೋಡೋಣ ಎಂದರು.
ರಾಜ್ಯದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ ಎನ್ನುವ ಮಾತನ್ನು ಅಲ್ಲಗಳೆದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂ. ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ. ಆದರೆ, ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತೋರಿಸುತ್ತಿರುವ ಅಸಡ್ಡೆಯಿಂದಾಗಿ ಸಮಸ್ಯೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಸಚಿವರು, 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಪಾಲಿನಲ್ಲಿ 50,000 ಕೋಟಿ ರೂ. ಬಂದಿಲ್ಲ. ಇದು ಹಣಕಾಸಿನ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ನಾಯಕರು ಸಚಿವ ಝಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಪ್ರಶ್ನಿಸಿದಾಗ ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಅವರದೇ ಪಕ್ಷದ ಕೆಲವರು ಒತ್ತಾಯಿಸುತ್ತಿದ್ದಾರಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಇದ್ದರು.
ರಾಜಕೀಯ ಕಾರಣಕ್ಕೆ ಕೇಂದ್ರ ಸರಕಾರದಿಂದ ಪ್ರವಾಸ ನಿರಾಕರಣೆ:
ಅಮೇರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ್ದು, ರಾಜಕೀಯ ಕಾರಣವಲ್ಲದೇ, ಮತ್ತೇನು.? ಕೇಂದ್ರ ಸರಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ 15,000 ಕೋಟಿ ರೂ. ಬಂಡವಾಳ ನಿಂತುಹೋಗಿದ್ದು, ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈ ತಪ್ಪಿದೆ. ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ, ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ನಮ್ಮ ಯಾವ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ? ಕೇಂದ್ರದಲ್ಲಿರುವುದು ಎನ್‌ಡಿಎ ಸರಕಾರವಲ್ಲ ನೋ ಡಾಟಾ ಅವಲೇಬಲ್ ಸರಕಾರ ಎಂದು ಟೀಕಿಸಿದರು.
ಈಗ ಅಮೇರಿಕಾ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ 'ರೈಲ್ ಹೋದ ಮೇಲೆ ಟಿಕೆಟ್ ತಗೊಂಡು ಪ್ರಯೋಜನವೇನು?' ಎಂದು ಹೇಳಿದ ಅವರು, ಶರತ್ ಬಚ್ಚೇಗೌಡ ಅವರು ಅಮೇರಿಕಾದಿಂದ ವಾಪಸ್ ಬಂದ ಮೇಲೆ ಚರ್ಚಿಸಲಾಗುವುದು ಎಂದರು.