Kalaburagi | ಭೀಮಾ ನದಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಜು. 15ರಿಂದ ಅಫಜಲಪುರದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ಅಫಜಲಪುರ: ಭೀಮಾ ನದಿ ಸಂಪೂರ್ಣ ಬರಿದಾಗಿರುವ ಹಿನ್ನೆಲೆಯಲ್ಲಿ ಉಜನಿ ಹಾಗೂ ನಾರಾಯಣಪೂರ ಜಲಾಶಯಗಳಿಂದ ತಕ್ಷಣ ನೀರು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘ (ಅಫಜಲಪುರ ಘಟಕ) ವತಿಯಿಂದ ಜುಲೈ 15ರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಶ್ರೀಮಂತ ಬಿರಾದಾರ್, ಗುರುಚಾಂದ ಕವಟೆ, ರಮೇಶ ಶೆಟ್ಟಿ, ಭೀಮರಾಯ ಗೌರ ಹೇಳಿದ್ದಾರೆ.
ಪಟ್ಟಣದಲ್ಲಿ ರೈತರೊಂದಿಗೆ ಪೂರ್ವಭಾವಿ ಸಭೆ ನಡಿಸಿ ತಹಶೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಭೀಮಾ ನದಿಯಲ್ಲಿ ನೀರಿನ ಕೊರತೆಯಿಂದ ತಾಲೂಕಿನ ಸುಮಾರು 70 ಸಾವಿರ ಎಕರೆ ಕಬ್ಬು ಬೆಳೆ ತೀವ್ರ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಉಜನಿ ಹಾಗೂ ನಾರಾಯಣಪೂರ ಜಲಾಶಯಗಳಿಂದ ಕೂಡಲೇ ಭೀಮಾ ನದಿಗೆ ನೀರು ಹರಿಸಬೇಕು, ಅಫಜಲಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜುಲೈ 15ರಿಂದ ಆರಂಭವಾಗುವ ಧರಣಿ ಸತ್ಯಾಗ್ರಹವು ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಮುಂದುವರಿಯಲಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಶೆಟ್ಟಿ, ಅಣ್ಣರಾಯಗೌಡ ಪಾಟೀಲ್, ಮೈಬೂಬ್ ನದಾಪ, ಸಿದ್ದು ಹುಲಿ, ಈರಣ್ಣ ಕಣ್ಣಿ, ಮಲ್ಲಣ್ಣ ರೋಡಗಿ, ಗುರುಗೌಡ ಕೇರಕನಹಳ್ಳಿ, ಅರ್ಜುನ ಸೋಮಜಾಳ, ಶಿವಾನಂದ ಹೇರೂರ, ಧನರಾಜ ಕೈರಾಟ್, ಲತೀಫ್ ಪಟೇಲ್, ಭೀಮರಾವ ಗೌರ, ಬಾಬು ಪಟೇಲ್, ಲಕ್ಷ್ಮಣ ದುಕಂದಾರ್, ಮಲಕಪ್ಪ ಬಿರಾದಾರ್, ಯಶವಂತ ಪಟ್ಟೇದಾರ್, ಶಿವಲಿಂಗಪ್ಪ ಬೆಳಗುಂಪಿ, ಚಿದಾನಂದ ಮೇತ್ರೆ, ಪರಶುರಾಮ ಭಾಸಗಿ, ಶ್ರೀಶೈಲ ಬೆನೂರ್ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.






