ಭಾರತ-ಪಾಕಿಸ್ತಾನ ಸಂಘರ್ಷ : ತುರ್ತು ಸೇವೆಗೆ ಹೊರಟ ಕಲಬುರಗಿಯ ಯೋಧ

ಕಲಬುರಗಿ : ಭಾರತ-ಪಾಕಿಸ್ತಾನ ನಡುವಿನ ಗಡಿ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನಲೆಯಲ್ಲಿ, ರಜೆ ಮೇಲೆ ಇರುವ ಯೋಧರನ್ನು ಭಾರತೀಯ ಸೇನೆ ತುರ್ತು ಸೇವೆಗೆ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹೆಂಡತಿಯ ಹೆರಿಗಾಗಿ ಒಂದು ತಿಂಗಳ ರಜೆ ಪಡೆದು ಮನೆಗೆ ಬಂದಿದ್ದ ಕಲಬುರಗಿ ಮೂಲದ ಯೋಧ ಹಣಮಂತರಾಯ್ ಔಸೆ ಅವರು ನವಜಾತ ಮಗುವನ್ನು ಬಿಟ್ಟು ಮರಳಿ ಕರ್ತವ್ಯಕ್ಕೆ ಹೊರಟಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಅವರು, ಕಳೆದ 20 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಮ್ಮುವಿನ ಶ್ರೀನಗರದಲ್ಲಿ ನಿಯೋಜಿತರಾಗಿದ್ದಾರೆ. ಎ.25ರಂದು ರಜೆ ಪಡೆದು ತಮ್ಮ ತವರಿಗೆ ಬಂದಿದ್ದ ಅವರು, ಹೆಂಡತಿ ಹಾಗೂ ಜನಿಸಿದ ಮಗುವಿನೊಂದಿಗೆ ಕೆಲವು ದಿನಗಳನ್ನು ಕಳೆಯುವ ನಿರೀಕ್ಷೆಯಲ್ಲಿ ಇದ್ದರು.
ಆದರೆ ಗಡಿ ಪರಿಸ್ಥಿತಿಯಲ್ಲಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ದೇಶ ಸೇವೆಯನ್ನು ಆದ್ಯತೆಯನ್ನಾಗಿ ಮಾಡಿಕೊಂಡ ಯೋಧ ಹಣಮಂತರಾಯ್ ಅವರು, ತಕ್ಷಣವೇ ಕರ್ತವ್ಯಕ್ಕೆ ತೆರಳುವ ನಿರ್ಧಾರ ತೆಗೆದುಕೊಂಡರು. ಹೈದರಾಬಾದ್ ಮೂಲಕ ಜಮ್ಮುವಿಗೆ ತೆರಳುತ್ತಿರುವ ಯೋಧನನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ ಕುಟುಂಬಸ್ಥರು ಕಣ್ಣು ತುಂಬಾ ನೋಡುತ್ತಾ ಬಿಳ್ಕೊಟ್ಟರು.
‘ಕುಟುಂಬಕ್ಕಿಂತ ದೇಶ ಸೇವೆ ಮುಖ್ಯ’ ಎಂಬ ಧೋರಣೆಯೊಂದಿಗೆ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿರುವುದು ಎಲ್ಲರಿಗೂ ಮಾದರಿ ಎನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಯೋಧನ ಧೈರ್ಯ ಮತ್ತು ಬದ್ಧತೆಯು ಪ್ರಶಂಸೆ ಪಡೆಯುತ್ತಿದೆ.







