ಶೀಘ್ರದಲ್ಲೇ ಭಾರತ ಮೂರನೆಯ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ : ಪ್ರಹ್ಲಾದ್ ಜೋಶಿ

ಕಲಬುರಗಿ: ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತವು ಮುಂಬರುವ ದಿನಗಳಲ್ಲಿ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ನಡೆದ “ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಮೆರಿಕ, ಇಂಗ್ಲೆಂಡ್, ಚೀನಾ ಬಳಿಕ ಭಾರತವೂ ಮಹತ್ವದ ಬೆಳವಣಿಗೆ ಸಾಧಿಸುತ್ತಿದೆ. ಆರ್ಥಿಕ ವಲಯದಲ್ಲಿಯೂ ದೇಶ ಮತ್ತೊಂದು ಹೆಜ್ಜೆ ಮುಂದೆ ಇಡಲಿದೆ ಎಂದು ಹೇಳಿದರು.
ಮೊದಲ ಬಾರಿಗೆ ಭಾರತದಲ್ಲಿ ಎಐ ಸಮ್ಮೇಳನ ನಡೆದಿರುವುದು ಹೆಮ್ಮೆಪಡುವ ವಿಷಯ ಎಂದ ಅವರು, ಇತರೆ ದೇಶಗಳಲ್ಲಿ ಉತ್ಪಾದನೆ (ಮ್ಯಾನುಫ್ಯಾಕ್ಚರಿಂಗ್) ಕುಸಿಯುತ್ತಿರುವಾಗ ಭಾರತದಲ್ಲಿ ಅದು ಹೆಚ್ಚಳವಾಗುತ್ತಿದೆ. ಕಾಲೇಜುಗಳು ಕೇವಲ ಪದವಿ ನೀಡುವುದಲ್ಲದೆ, ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
1958ರಲ್ಲಿ ಸ್ಥಾಪಿತವಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಇಂದು ಸುರೇಂದ್ರ ಪಾಲ್ ಸಿಂಗ್ ಸಲುಜಾ ಅವರಂತಹ ಉದ್ಯಮಿಗಳನ್ನು ರೂಪಿಸಿದೆ. ಗುಣಮಟ್ಟದ ಶಿಕ್ಷಣವನ್ನು ಮುಂದುವರಿಸಿದರೆ ಮುಂದಿನ 10 ವರ್ಷಗಳಲ್ಲಿ ಈ ಕಾಲೇಜು ಟಾಪ್ ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಈ ಭಾಗದಲ್ಲಿ ಲಕ್ಷಾಂತರ ಎಂಜಿನಿಯರ್‌ಗಳನ್ನು ರೂಪಿಸಿದ ಶ್ರೇಯಸ್ಸು ಎಚ್‌ಕೆಇ ಸಂಸ್ಥೆಗೆ ಸಲ್ಲುತ್ತದೆ. ಬಡಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ದೂರದರ್ಶಿತ್ವದೊಂದಿಗೆ ಆರಂಭವಾದ ಸಂಸ್ಥೆ ಇಂದು ಬೃಹದಾಕಾರದಲ್ಲಿ ಬೆಳೆದಿದೆ. ತಾವೂ ಇದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವುದಾಗಿ ತಿಳಿಸಿದರು.
ಹೈದರಾಬಾದಿನ ಪ್ರೀಮಿಯರ್ ಎನರ್ಜೀಸ್ ಕಂಪನಿಯ ಸ್ಥಾಪಕ ಸ್ಥಾಪಕ ಅಧ್ಯಕ್ಷ ಸುರಿಂದರ್ ಪಾಲ್ ಸಿಂಗ್ ಸಲೂಜಾ, ನಿವೃತ್ತ ಡಿಜಿಪಿ ರಾಘವೇಂದ್ರ ಔರಾದಕರ್, ಎಂಎಲ್ಸಿಗಳಾದ ಸುನೀಲ್ ವಲ್ಯಾಪುರೆ, ಜಗದೇವ ಗುತ್ತೇದಾರ್, ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಂಸದ ಉಮೇಶ್ ಜಾಧವ್, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಹೆಚ್.ಕೆ.ಇ ಸಂಸ್ಥೆಯ ಮಾಜಿ ಸದಸ್ಯ ವಿಜಯಕುಮಾರ್ ದೇಶಮುಖ್, ಉಪಾಧ್ಯಕ್ಷ ರಾಜ ಭೀಮಳ್ಳಿ, ಕಾರ್ಯದರ್ಶಿ ಉದಯ ಚಿಂಚೋಳಿ, ಸಹ ಕಾರ್ಯದರ್ಶಿ ಡಾ.ಕೈಲಾಸ್ ಪಾಟೀಲ್, ರಜನೀಶ್ ವಾಲಿ, ಗಂಗೂಬಾಯಿ ಮಾನಕರ, ಸದಸ್ಯರಾದ ಡಾ. ಶರಣಬಸಪ್ಪ ಹರವಾಳ್, ಡಾ. ಅನಿಲ್ ಪಟ್ಟಣ್ ಮತ್ತಿತ್ತರರು ವೇದಿಕೆಯ ಮೇಲಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಪತ್ ಗಿಲ್ದಾ, ಪ್ರಾಚಾರ್ಯ ಡಾ.ಸಿದ್ದರಾಮ ಪಾಟೀಲ್, ಉಪ ಪ್ರಾಚಾರ್ಯರಾದ ಡಾ.ಎಸ್.ಆರ್. ಹೊಟ್ಟಿ, ಡಾ. ಭಾರತಿ ಹರಸೂರ್, ವಿಶೇಷಾಧಿಕಾರಿಯಾದ ಡಾ. ದೇವ ಸುಧಾಕರ್ ಪಾಟೀಲ್, ಸಂಚಾಲಕ ಪ್ರೊ. ಶಿವಕುಮಾರ್ ಪಾಟೀಲ್, ಸಹ ಸಂಚಾಲಕ ಡಾ. ನಾಗೇಂದ್ರ ಎಚ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಶ್ರೀದೇವಿ ಸೋಮ, ಮಾಧ್ಯಮ ಸಂಚಾಲಕ ಡಾ. ಬಾಬುರಾವ್ ಶೇರಿಕಾರ್, ಡಾ. ನಾಗೇಶ್ ಸಾಲಿಮಠ ಪ್ರೊ. ಅಶೋಕ್ ಪಾಟೀಲ್ ಸೇರಿದಂತೆ ಸಹಸ್ರಾರು ಹಳೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ, ಎಚ್.ಕೆ. ಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಂತ್ರಿಕ ಪಾರ್ಕ್, ಎಐ ಕೇಂದ್ರದ ಶಂಕುಸ್ಥಾಪನೆ :
ಸಮ್ಮೇಳನದಲ್ಲಿ ‘ಪಿಡಿಎ ಹಳೆಯ ವಿದ್ಯಾರ್ಥಿಗಳ ಸಂಶೋಧನಾ ಮತ್ತು ತಾಂತ್ರಿಕ ಪಾರ್ಕ್’ ಹಾಗೂ ‘ಕೃತಕ ಬುದ್ಧಿಮತ್ತೆ (AI) ಉತ್ಕೃಷ್ಟತಾ ಕೇಂದ್ರ’ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.






