ಜ.31ರಿಂದ ಫೆ.3ವರೆಗೆ ಯಳಸಂಗಿಯಲ್ಲಿ ಭಾರತೀಯ ಆಧ್ಯಾತ್ಮಿಕ ಉತ್ಸವ: ಪರಮಾನಂದ ಮಹಾಸ್ವಾಮೀಜಿ

ಕಲಬುರಗಿ: ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿನ ಜಗದ್ಗುರು ಶ್ರೀ ಸಿದ್ಧಾರೂಢ ಮಠದ ರಜತ ಮಹೋತ್ಸವ ಶ್ರೀ ಪರಮಾನಂದ (ಸಿದ್ಧಾರೂಢ ಭಾರತಿ), ಮಹಾಸ್ವಾಮಿಗಳ ದ್ವ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಜ.30ರಿಂದ ಫೆ.3ರವರೆಗೆ ಶ್ರೀಮಠದಲ್ಲಿ ಭಾರತೀಯ ಆಧ್ಯಾತ್ಮಿಕ ಉತ್ಸವ ಅಂಗವಾಗಿ ಐತಿಹಾಸಿಕವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಲಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಪರಮಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಆಳಂದ ಪಟ್ಟಣದ ಭಾರತನಗರದ ಜಗದ್ಗುರು ಶ್ರೀ ಸಿದ್ಧಾರೂಢ ಮಠದಲ್ಲಿ ಬುಧವಾರ ತಮ್ಮ ಕಾರ್ಯಕ್ರಮದ ಸಿದ್ಧತೆಗೆ ಕರೆದ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಉತ್ಸವದ ಭರದ ಸಿದ್ಧತೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಅನೇಕ ಜನ ಸಾಧುಸಂತರು ಮಹಾತ್ಮರು ಜಗದ್ಗುರುಗಳು ಪಂಡಿತೋತ್ತಮರು ಆಗಮಿಸುತ್ತಿದ್ದಾರೆ. ಅವರೆಲ್ಲರ ಆಧ್ಯಾತ್ಮಿಕ ಚಿಂತನೆಗಳು, ಕೃಷಿ ವಿಚಾರಗಳು ಸಾಮಾಜಿಕ ಚಿಂತನೆಗಳು ಎಲ್ಲವೂ ನಾಡಿನ ಸದ್ಭಕ್ತಸ್ತೋಮಕ್ಕೆ ಲಾಭತಲುಪಿಸುವ ಜೊತೆಗೆ ಪೂರ್ವಭಾವಿಯಾಗಿ ಹತ್ತು ದಿನಗಳ ಕಾಲ ಯೋಗ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಶಿಬಿರಗಳು ಹೀಗೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಜ.20ರಿಂದ19ರವರೆಗೆ ಯೋಗಶಿಬಿರ ಆರಂಭಿಸಿದ್ದು, ಜ.23ರಿಂದ ಫೆ.3ವರೆಗೆ ಶ್ರೀ ಸಿದ್ಧರೂಢ ಕಥಾಮೃತ ಪಾರಾಯಣ ಸಪ್ತಾಹ, ಜ.30ರಿಂದ ಫೆ. 3ವರೆಗೆ ಶ್ರೀಮದ್ಧಭಗ್ವತಗೀತಾ ಪಾರಾಯಣ, ಜ.19ರಿಂದ ಫೆ. 29ರವರೆಗೆ ಸಿದ್ಧಾರೂಢರ ಉತ್ಸವ ಮೂರ್ತಿಯ 108 ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಐದು ದಿನಗಳ ಕಾಲಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ಪ್ರವಚನ ಬೃಹತ್ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದರು.
ಕಣ್ಣೀರಿಯಾ ಅದೃಶ್ಯ ಕಾಡು ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಕೃಷಿ ಋಷಿ ರೈತ ವಿಜ್ಞಾನಿಯಾಗಿರುವಂತ ಗುಜರಾತಿನ ಗೋಶಾಲೆಯ ಗೋಪಾಲ್ ಭಾಯ್ ಸುತಾರಿ ಸೇರಿದಂತೆ ಜಿಡಗಾದ ಡಾ. ಮುರುಘರಾಜೇಂದ್ರ ಶ್ರೀ, ಹವಾ ಮಲ್ಲಯ್ಯಾ ಮುತ್ಯಾ, ನಿಂಬಾಳ ಶ್ರೀ, ಬಾಲ್ಕಿ ಶ್ರೀ, ಬೆಂಗಳೂರಿನ ಶ್ರೀಗಳು ಸೇರಿ ನೂರಕ್ಕೆ ಹೆಚ್ಚು ಸಾಧು ಸಂತರು, ಮಠಾಧೀಶರು, ಶಾಸಕರು, ಸಚಿವರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜ.30ರಂದು ಬೆಳಗಿನ ಜಾವ 8ಗಂಟೆಗೆ ಯಳಸಂಗಿ ಶ್ರೀ ಸಿದ್ಧಗಿರಿ ತಪ್ಪೋವನದಲ್ಲಿ 1008 ಸುಮಂಗಲೆಯ ಉಡಿತುಂಬುವುದು, ನಂತರ ಸಹಸ್ರ ಕುಂಭ ಕಳಸದೊಂದಿಗೆ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಅಮೃತ ಶಿಲಾ ಮೂರ್ತಿಯ ಹಾಗೂ ಆಗಮಿಸಿದ ಮಹಾತ್ಮರ ಜೊತೆಯಲ್ಲಿ ಜೊತೆಯಲ್ಲಿ 25 ಜೋಡೆತ್ತುಗಳ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಶ್ರೀಮಠಕ್ಕೆ ಸಾಗಲಿದೆ ಎಂದು ಹೇಳಿದರು. ಬೆಳಗಿನ 9.30ಗಂಟೆಗೆ ನಡೆಯುವ ಧಾರ್ಮಿಕ ಸಭೆ ಹಾಗೂ ಪ್ರವಚನದಲ್ಲಿ ಬೀದರ ಚಿದಂಬರಾಶ್ರಮದ ಡಾ.ಶಿವುಕುಮಾರ ಮಹಾಸ್ವಾಮಿಗಳು, ಯಳಸಂಗಿ, ಬಬಲಾದ ಮಠದ ಶ್ರೀ ಗುರುಪಾದಲಿಂಗ ಮಹಾಶಿಯೋಗಿಗಳು ಸೇರಿದಂತೆ ಪ್ರಮುಖ ಊರುಗಳ ಮಠಾಧೀಶರು ಪಾಲ್ಗೊಳ್ಳುವರು ಎಂದರು.
ಸಂಜೆ 6ಗಂಟೆಗೆ ನಡೆಯುವ ಪ್ರವಚನದ ಸಾನ್ನಿಧ್ಯವನ್ನು ಬೀದರ ಡಾ. ಶಿವುಕುಮಾರ ಶ್ರೀಗಳು, ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಮುಚ್ಚಳಂಬದ ಪ್ರಣವಾನಂದ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಆಗಮಿಸುವರು.
ಜ.31ರಂದು ಬೆಳಗಿನ 9.30ಕ್ಕೆ ಬೀದರ ಡಾ. ಶಿವುಕುಮಾರ ಶ್ರೀಗಳಿoದ ಪ್ರವಚನ ನಡೆಯುವುದು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೆಯಂದ್ರ, ಬಿ.ಜಿ.ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಶಾಸಕರಾದ ಬಸವರಾಜ ಮುತ್ತಿಮುಡ್, ಶರಣು ಸಲಗರ, ಮಾಜಿ ಶಾಸಕ ದತ್ತಾತ್ರೆಯ ಪಾಟೀಲ, ವೇದಿಕೆಯಲ್ಲಿ ನಿತ್ಯ ಶ್ರೀ ಪರಮಾನಂದ ಶ್ರೀಗಳಿಗೆ ಭಕ್ತಾದಿಗಳಿಂದ ಸರಣಿ ತುಲಾಬಾರ ಸೇವೆ ನಡೆಯುವುದು. ಅಲ್ಲದೆ, ಆಳಂದ ಸಿದ್ಧರೂಢ ಮಠದ ಭಕ್ತಾದಿಗಳಿಂದ ರಜತ ಮಹೋತ್ಸವ ಸಿದ್ಧಾರೂಢರ ಉತ್ಸವಮೂರ್ತಿ ತುಲಾಭಾರ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಕೈಗೊಂಡ ಒಟ್ಟು 50 ಸಾಧಕರಿಗೆ ಗೌರವ ಸತ್ಕಾರ, ನಡೆಯಲಿದೆ. ಲೇಖಕ ಎಸ್.ಆರ್. ಒಡೆಯರ್ ರಚಿತ ಕಿರು ಪುಸ್ತಕ ಅನುಭವಾಂಕುರ ಬಿಡುಗಡೆ ನಡೆಯಲಿದೆ.
ಫೆ.1ರಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಶಾಸನ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಸಿದ್ಧರಾಮ ಮೇತ್ರೆ, ಕೆಕೆಆರ್‌ಡಿಬಿ ಡಾ. ಅಜಯಸಿಂಗ್, ಸಂಸದ ಸಾಗರ ಖಂಡ್ರೆ, ಶಾಸಕ ಅಲ್ಲಂ ಪ್ರಭು, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಮತ್ತಿತರು ಆಗಮಿಸುವರು.
ಫೆ.2ರಂದು ಬೆಳಗಿನ 9.30ಗಂಟೆಗೆ ಪ್ರವಚನ ಹಾಗೂ ಸಂಜೆ 6ಗಂಟೆಗೆ ಭಾರತೀಯ ಕೃಷಿ ಸಂಸ್ಕೃತಿ ಪ್ರವಚನ ಕನ್ನೇರಿ ಮಠದ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ವಿಜಯಪೂರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು, ಮುಚ್ಚಳಂಬ ಪ್ರಣವಾನಂದ ಮಹಾಸ್ವಾಮಿಗಳು, ಹಂಪಿಯ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು, ವಿಶ್ವ ಹಿಂದೂ ಪರಿಷತ್ ಉತ್ತರಾ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪಾ, ಗುಜರಾತನ ಗೋಪಾಲ ಭಾಯ್, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅನೇಕರು ಆಗಮಿಸುವರು.
ಫೆ.3ರ ಕಾರ್ಯಕ್ರಮಕ್ಕೆ ಶ್ರೀ ಹವಾಮಲ್ಲಿನಾಥ ಮಹಾಸ್ವಾಮಿಗಳು ಮತ್ತಿತರು ಪಾಲ್ಗೊಳ್ಳುವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಕಮೀಟಿಯ ಕಾರ್ಯದರ್ಶಿ ಭೀಮಣ್ಣಾ ಶಿವಪೂರೆ, ಸುಧಾಕರ ಖಾಂಡೇಕರ್, ಆಳಂದ ಸಿದ್ಧರೂಢ ಮಠದ ಧರ್ಮಲಿಂಗ ಸ್ವಾಮಿ ಜಗದೆ ಮತ್ತಿತರು ಉಪಸ್ಥಿತರಿದ್ದರು.







