ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಹುಮನಾಬಾದ್ನಲ್ಲಿ ಸೆರೆ

ಸಂತೋಷ್ ಬಸಪ್ಪ ಮೇತ್ರೆ
ಕಲಬುರಗಿ : ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಓರ್ವನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸಂತೋಷ್ ಬಸಪ್ಪ ಮೇತ್ರೆ ಬಂಧಿತ ಕೈದಿಯಾಗಿದ್ದಾನೆ. ಆತ ಮಂಗಳವಾರ ಬೆಳಗಿನ ಜಾವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ.
ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಸ್ತಾನ್ ಮಣಿಕಪ್ಪ ಹಾಗೂ ಕೊಲೆ ಪ್ರಕರಣದ ಅಪರಾಧಿಯಾಗಿರುವ ಸಾಗರ ಭೀಮರಾಯ ಎಂಬ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬೀದರ್ ಜಿಲ್ಲೆಯವರಾದ ಸಂತೋಷ್ ಬಸಪ್ಪ, ಮಸ್ತಾನ್ ಮಣಿಕಪ್ಪ ಹಾಗೂ ಸಾಗರ ಭೀಮರಾಯ ಅವರು ಮಂಗಳವಾರ ನಸುಕಿನ ಜಾವ ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದರು. ಇವರಲ್ಲಿ ಸಂತೋಷ್ ಬಸಪ್ಪನನ್ನು ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದ್ದು, ಉಳಿದ ಇಬ್ಬರ ಬಂಧನಕ್ಕೆ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.




