ನರೇಗಾ ಯೋಜನೆಯಡಿ ಕಾರ್ಮಿಕರ ಆಯವ್ಯಯ ಸಿದ್ಧಪಡಿಸಲು ಸೂಚನೆ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ‘ಗ್ರಾಮಾಭಿವೃದ್ಧಿಯ ಹೊಸ ಹಾದಿ-ಯುಕ್ತಧಾರ’ ಮಾರ್ಗಸೂಚಿಗಳನ್ನು ಅನುಸರಿಸಿ 2026-27ನೆ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸುವ ಸಂಬಂಧ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಕುಶಲ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷದಲ್ಲಿ 100 ದಿನಗಳ ಅಕುಶಲ ಕೆಲಸ ಖಾತ್ರಿ ಪಡಿಸುತ್ತದೆ. ಕೂಲಿಕಾರರಿಗೆ ಸಕಾಲದಲ್ಲಿ ಅಕುಶಲ ಕೆಲಸ ಒದಗಿಸುವುದರೊಂದಿಗೆ ಬಹುಬಾಳಿಕೆ ಆಸ್ತಿಗಳನ್ನು ಸೃಜಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹೀಗೆ ಸೃಜಿಸುವ ಆಸ್ತಿಗಳನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಮಿಕ ಆಯವ್ಯಯವನ್ನು ಸಿದ್ಧಪಡಿಸಲಾಗುತ್ತಿತ್ತು. ಈ ಬಾರಿ 2026-27ನೆ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲು ‘ಯುಕ್ತಧಾರ’ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಪರೀಕ್ಷಾರ್ಥ ತಾಲ್ಲೂಕಿಗೊಂದು ಗ್ರಾಮ ಪಂಚಾಯತಿಯಲ್ಲಿ ಈಗಾಗಲೆ ತಂತ್ರಾಂಶದಡಿ ಆಯವ್ಯಯವನ್ನು ಸಿದ್ದಪಡಿಸಲಾಗಿತ್ತು, ಕಾರ್ಮಿಕ ಆಯವ್ಯಯವನ್ನು ಸಿದ್ದಪಡಿಸಲು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಈ ತಂತ್ರಾಂಶ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಈ ತಂತ್ರಾಂಶದ ಮೂಲಕವೆ ಮುಂದಿನ ಆಯವ್ಯಯ ಸಿದ್ದಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಅನುಷ್ಠಾನ ಅಧಿಕಾರಿಗಳಿಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯ 2026-27ನೆ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ‘ಯುಕ್ತಧಾರ’ ಮೂಲಕ ಸಿದ್ದಪಡಿಸಲಾದ ಕಾರ್ಮಿಕ ಆಯವ್ಯಯವನ್ನು ಗ್ರಾಮ ಸಭೆಯಲ್ಲಿ ಸಿದ್ಧಪಡಿಸಲು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







