ಬಸವಣ್ಣರಿಗೆ ಅವಮಾನ ಪ್ರಕರಣ | ಕಲಬುರಗಿಯಲ್ಲಿ ಧರಣಿ, ಪ್ರತಿಕೃತಿ ದಹಿಸಿ ಆಕ್ರೋಶ

ಕಲಬುರಗಿ, ನ.21: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಶರಣ ಸಂಕುಲದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ‘ಬಸವ ಮಂಟಪ’ಎಂಬ ಕೃತಿ ರಚಿಸಿರುವ ಲೇಖಕ ರವಿ ಹಂಜ್ ಹಾಗೂ ಅದರ ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಧರಣಿ ನಡೆಯಿತು.
ನಗರದ ಜಗತ್ ವೃತ್ತದಲ್ಲಿರುವ ಬಸವಣ್ಣರ ಪ್ರತಿಮೆಯ ಎದುರು ಜಮಾಯಿಸಿದ ನೂರಾರು ಬಸವ ಭಕ್ತರು ಹಾಗೂ ಸಮುದಾಯದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್, ಶಂಕರ್ ಬಿದರಿ ಹಾಗೂ ಮನು ಬಳಿಗಾರ್ ಅವರ ಪ್ರತಿಕೃತಿಗಳನ್ನು ದಹಿಸಿ ಧರಣಿನಿರತರು ಘೋಷಣೆಗಳನ್ನು ಕೂಗಿದರು.
ಕೃತಿ ನಿಷೇಧಕ್ಕೆ ಆಗ್ರಹ: ಸಮಾಜದಲ್ಲಿದ್ದ ಮೇಲು-ಕೀಳು ತಾರತಮ್ಯವನ್ನು ಹೋಗಲಾಡಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವಗಳಿಗೆ ಧಕ್ಕೆ ತರುವ ರೀತಿಯಲ್ಲಿ ಆಧಾರರಹಿತ ಹಾಗೂ ವಿಕೃತ ಬರಹಗಳನ್ನು ಪ್ರಕಟಿಸಲಾಗಿದೆ. ಕೂಡಲೇ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಂಡು ನಿಷೇಧಿಸಬೇಕು ಎಂದು ಒತ್ತಾಯಿಸಲಾಯಿತು.
ಇಂತಹ ಅವಹೇಳನಕಾರಿ ಕೃತಿ ಪ್ರಕಟನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ವಿಶ್ವೇಶ್ವರ ಭಟ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ‘ವಿಶ್ವವಾಣಿ’ ಪತ್ರಿಕೆಯ ಅನುಮತಿಯನ್ನು ರದ್ದುಗೊಳಿಸಿ, ಸರಕಾರದಿಂದ ನೀಡಲಾಗುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬಸವ ತತ್ವಗಳನ್ನು ತಿರುಚುವ ಮತ್ತು ಶರಣರ ಇತಿಹಾಸವನ್ನು ವಿಕೃತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೋಟ್ಯಂತರ ಬಸವ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಧರಣಿನಿರತರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಧರಣಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜಿ ಪಾಟೀಲ್, ದತ್ತಾತ್ರೇಯ ಸಿ. ಪಾಟೀಲ್ ರೇವೂರ್, ಅಮರನಾಥ್ ಪಾಟೀಲ್, ಚಂದು ಪಾಟೀಲ್, ಶರಣು ಮೋದಿ, ಅರುಣ ಕುಮಾರ್ ಪಾಟೀಲ್, ಕಿರಣ ದೇಶಮುಖ, ಆರ್.ಜಿ.ಶೆಟಗಾರ, ಜ್ಯೋತಿ ಮರಗೋಳ, ಮಾಲಾ ಕಣ್ಣಿ, ನೀಲಕಂಠ ರಾವ್ ಮುಲಗಿ, ರವೀಂದ್ರ ಶಹಾಬಾದಿ ಸೇರಿದಂತೆ ಸಮಾಜದ ಮತ್ತು ಯುವ ಘಟಕ ಮತ್ತು ಮಹಿಳಾ ಘಟಕದ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುಮಾರು 900 ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಸಂಸತ್ತಿನ ಪರಿಕಲ್ಪನೆ, ಸ್ತ್ರೀ ಸಮಾನತೆ ಹಾಗೂ ವಚನ ಕ್ರಾಂತಿಯ ಆಶಯಗಳನ್ನು ಜಗತ್ತಿಗೆ ಸಾರಿದ ವಿಶ್ವಮಾನವ ಬಸವಣ್ಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಪಕ್ಷ, ಜಾತಿ, ಧರ್ಮದ ಭೇದ ಮರೆತು ಎಲ್ಲರೂ ಈ ಘಟನೆಯನ್ನು ಖಂಡಿಸುತ್ತಿದ್ದು, ಆರೋಪಿಯನ್ನು ತಕ್ಷಣ ಬಂಧಿಸಬೇಕು ಹಾಗೂ ಅವಹೇಳನಕಾರಿ ಬರಹ ಪ್ರಕಟಿಸಿದ ಸಂಬಂಧಪಟ್ಟ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
--ಅಲ್ಲಮಪ್ರಭು ಪಾಟೀಲ್,
ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ
ವಿಶ್ವಗುರು ಬಸವಣ್ಣನವರು ಜಾತಿ-ಜನಾಂಗಗಳ ಭೇದ ಮರೆತು ಎಲ್ಲರನ್ನೂ ಒಗ್ಗೂಡಿಸಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದವರು. ಮಹಿಳೆಯರಿಗೆ ಸಮಾನ ಆದ್ಯತೆ ನೀಡಿ, ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳನ್ನು ಸಾರಿದ ಮಹಾನ್ ಮಾನವತಾವಾದಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ. ಇದಕ್ಕೆ ಸಂಬಂಧಿತ ಪುಸ್ತಕ ನಿಷೇಧಿಸುವ ಕುರಿತು ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸ್ವಾಗತ. ಈಗಾಗಲೇ ಎಫ್ಐಆರ್ ದಾಖಲಾಗಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಆತ ಭಾರತಕ್ಕೆ ಬರದಂತೆ ಅಗತ್ಯ ಕ್ರಮ ವಹಿಸಬೇಕು. ಈ ವಿಚಾರದಲ್ಲಿ ಜಾತಿ, ಧರ್ಮ ಹಾಗೂ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಬೇಕು.
- ಶಶೀಲ್ ಜಿ. ನಮೋಶಿ, ವಿಧಾನ ಪರಿಷತ್ ಸದಸ್ಯ






