ಕಲಬುರಗಿ ಜಿಲ್ಲಾಧಿಕಾರಿಗೆ ಬಿಜೆಪಿಯಿಂದ ಅವಮಾನ ಖಂಡನಾರ್ಹ: ಮುಹಿಯುದ್ದೀನ್ ಇನಾಮ್‌ದಾರ್

ಕಲಬುರಗಿ: ಶನಿವಾರ ಬಿಜೆಪಿ ಪಕ್ಷದಿಂದ ಕಲಬುರಗಿ ಚಲೋ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎನ್.ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನೀವು ಪಾಕಿಸ್ತಾನದಿಂದ ಬಂದಿದ್ದೀರಾ ಎಂದು ಕೇಳಿರುವುದು ಖಂಡನೀಯ. ಇದು ಕೇವಲ ಜಿಲ್ಲಾಧಿಕಾರಿಗಳಿಗೆ ಮಾಡಿದ ಅಪಮಾನ ಅಲ್ಲ ಇಡೀ ಭಾರತೀಯರಿಗೆ ಮಾಡಿದ ಅಪಮಾನವಾಗಿದೆ ಎಂದು ಟಿಪ್ಪು ಸುಲ್ತಾನ್ ಕಮಿಟಿಯ ಜೇವರ್ಗಿ ತಾಲ್ಲೂಕು ಅಧ್ಯಕ್ಷ ನ್ಯಾ. ಮುಹಿಯುದ್ದೀನ್ ಇನಾಮ್‌ದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಸಚಿವ ಆಪರೇಷನ್ ಸಿಂಧೂರನಲ್ಲಿ ಮುಖ್ಯ ಪಾತ್ರವಹಿಸಿದ ಭಾರತ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರಿಗೆ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡುತ್ತಾನೆ. ಇದು ಬಿಜೆಪಿ ಅವರ ಸಂಸ್ಕೃತಿ ತೋರಿಸಿಕೊಡುತ್ತದೆ. ಈ ರೀತಿಯಾಗಿ ಹೇಳಿಕೆ ಕೊಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಅವರಿಗೆ ಪಾಕಿಸ್ತಾನದೊಂದಿಗೆ ಇಷ್ಟೊಂದು ಪ್ರೀತಿ ಇರುವುದರಿಂದ ಪ್ರತಿಯೊಂದು ಭಾಷಣದಲ್ಲಿ ಆ ರಾಷ್ಟ್ರದ ಹೆಸರು ಬಳಸುತ್ತಾರೆ. ನಾವು ಭಾರತದ ನಿವಾಸಿಗಳು ಬದುಕುವುದು ಮತ್ತು ಸಾಯುವುದು ಇಲ್ಲೇ. ಪದೇ ಪದೇ ಆ ರಾಷ್ಟ್ರದ ಹೆಸರು ಬಾಯಿಯಲ್ಲಿ ಬರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.





