ಸೇಡಂನಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಜಯ ಕರ್ನಾಟಕ ಒತ್ತಾಯ
ಅನಧಿಕೃತ ಅಂಗಡಿ, ಬಂಡಿ ತೆರವುಗೊಳಿಸಿ ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸುವಂತೆ ಮನವಿ

ಸೇಡಂ: ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡು ನಡೆಸುತ್ತಿರುವ ಅನಧಿಕೃತ ವ್ಯಾಪಾರ ಅಂಗಡಿಗಳು, ಬಂಡಿಗಳು ಹಾಗೂ ತಳ್ಳುವ ಬಂಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರವೀಂದ್ರ ನಾಯಕ್, ನಗರದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗೆ ಇರುವ ಮುಖ್ಯ ರಸ್ತೆಯ ಫುಟ್‌ಪಾತ್‌ಗಳಲ್ಲಿ ಹಲವು ಮಂದಿ ಯಾವುದೇ ಅನುಮತಿ ಇಲ್ಲದೆ ಬಂಡಿ, ತಳ್ಳುವ ಬಂಡಿ ಹಾಗೂ ವಿವಿಧ ವ್ಯಾಪಾರ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಫುಟ್‌ಪಾತ್‌ಗಳು ಸಾರ್ವಜನಿಕರು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದು, ಅತಿಕ್ರಮಣದಿಂದ ಪಾದಚಾರಿಗಳು ರಸ್ತೆ ಮೇಲೆಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗಿದ್ದು, ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕರ ಬಳಕೆಗೆ ನಿರ್ಮಿಸಲಾದ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.
ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅನಧಿಕೃತ ಅಂಗಡಿಗಳು, ಬಂಡಿಗಳು ಹಾಗೂ ತಳ್ಳುವ ಬಂಡಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷರಾದ ಗೌತಮ್ ಆರ್. ಹಳ್ಳಿ, ರವಿಕುಮಾರ್ ಹುಡಗಿ, ದಿನೇಶ್ ಗೌಡ ನಾಯಕ, ಈಶ್ವರಾಜ್ ಮಾಧವರ, ಷಣ್ಮುಖ ತೆಲ್ಕೂರ್, ಭಗವಂತ ರಂಜೊಳ, ಹನುಮಂತ ಅನ್ನರ, ಅನಿಲ್ ದೊರೆ, ನಾಗು ಬಟಗೇರಾ, ನಾಗು ದೋರೆ, ಯಲ್ಲಾಲಿಂಗ ಮೇತ್ರಿ, ವಾಸುದೇವ ತರ್ನಳಿ, ಪ್ರವೀಣ್ ಅಂಬರೀಶ್, ರಾಜು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






