ಜೇವರ್ಗಿ : ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರ ವಿರುದ್ಧ ಆ. 23ರಂದು ಕಪ್ಪು ಬಟ್ಟೆ ಪ್ರದರ್ಶನ

ಜೇವರ್ಗಿ: ಕಳೆದ ಹಲವು ತಿಂಗಳುಗಳಿಂದ ಜೇವರ್ಗಿಯ ಮಿನಿ ವಿಧಾನಸೌಧದ ಎದುರು ಪೌರಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ಅವರ ಬೇಡಿಕೆಗಳಿಗೆ ಸ್ಪಂದಿಸದ ಸ್ಥಳೀಯ ಶಾಸಕ ಹಾಗೂ ರಾಜ್ಯದ ನೂತನ ಸಚಿವ ಡಾ. ಅಜಯಸಿಂಗ್ ಅವರ ವಿರುದ್ಧ ಆ. 23ರಂದು ಕಪ್ಪು ಬಟ್ಟೆ ಪ್ರದರ್ಶಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಜೇವರ್ಗಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಪೌರಕಾರ್ಮಿಕರು ಕಳೆದ ಏ. 13ರಿಂದ ಮಿನಿ ವಿಧಾನಸೌಧದ ಎದುರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಸುಮಾರು ನಾಲ್ಕು ತಿಂಗಳಿಗೂ ಅಧಿಕ ಕಾಲ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಜೇವರ್ಗಿ ಪುರಸಭೆಯ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಹಲವು ವರ್ಷಗಳಿಂದ 16 ಮಂದಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು. ಕಸ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಸೇರಿದಂತೆ ಪಟ್ಟಣದ ವಿವಿಧೆಡೆ ಸತ್ತ ದನ, ಎಮ್ಮೆ, ಹಂದಿ, ನಾಯಿ ಮತ್ತಿತರ ಪ್ರಾಣಿಗಳ ಮೃತದೇಹಗಳನ್ನು ತೆರವುಗೊಳಿಸಿ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಏಕಾಏಕಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಕೆಲಸಕ್ಕೆ ಮರುನೇಮಕ ಮಾಡುವಂತೆ ಒತ್ತಾಯಿಸಿ ಪೌರಕಾರ್ಮಿಕರು ಈ ಹಿಂದೆ ಶಾಸಕರ ಕಲಬುರಗಿ ನಿವಾಸದ ಎದುರೂ ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ಶಾಸಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದರು. ಶಾಸಕರ ಭರವಸೆಯನ್ನು ನಂಬಿ ಹೋರಾಟ ಹಿಂಪಡೆದರೂ ಹಲವು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮುಖಂಡರು ದೂರಿದ್ದಾರೆ.
ಏ. 14, 2025ರಂದು ಶಾಸಕ ಡಾ. ಅಜಯಸಿಂಗ್ ಅವರು ಅಧಿಕಾರಿಗಳೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿ, 15 ದಿನಗಳೊಳಗೆ ಪೌರಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆಯೂ ಈಡೇರಲಿಲ್ಲ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಬಳಿಕ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಚಳವಳಿ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಭಾರಿ ಮಳೆ ಸುರಿದರೂ ಹೋರಾಟ ಮುಂದುವರಿಸಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಪೌರಕಾರ್ಮಿಕರು ಹಾಗೂ ಸಂಘಟನೆಯ ಓರ್ವ ಮುಖಂಡರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಮುಂದಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಶಾಸಕರು ದೂರವಾಣಿ ಮೂಲಕ ಮತ್ತೊಮ್ಮೆ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಏ. 13, 2026ರಿಂದ ಪೌರಕಾರ್ಮಿಕರು ಮಿನಿ ವಿಧಾನಸೌಧದ ಎದುರು ಮತ್ತೆ ಧರಣಿ ಆರಂಭಿಸಿದ್ದು, ಇದೀಗ 127 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಆ. 23ರಂದು ಜೇವರ್ಗಿಗೆ ಸಚಿವರಾಗಿ ಆಗಮಿಸುತ್ತಿರುವ ಡಾ. ಅಜಯಸಿಂಗ್ ಅವರ ಗಮನ ಸೆಳೆಯಲು ಕಪ್ಪು ಬಟ್ಟೆ ಪ್ರದರ್ಶಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಒಕ್ಕೂಟದ ಮುಖಂಡರಾದ ಇಬ್ರಾಹಿಂ ಪಟೇಲ ಯಾಳವಾರ, ಮಲ್ಲಣ್ಣ ಕೊಡಚಿ, ಭೀಮಾಶಂಕರ ಬಿಲ್ಲಾಡ, ಪುಂಡಲೀಕ ಗಾಯಕ್ವಾಡ, ಮೈನೋದ್ದಿನ ಇನಾಮದಾರ, ವಿಶ್ವರಾಧ್ಯ ಮಾಯಿ, ಶ್ರೀಹರಿ ಕರ್ಕಳ್ಳಿ, ಸಿದ್ರಾಮ ಕಟ್ಟಿ, ಶಿವಶರಣ ಮಾಡರಗಿ, ಸಿದ್ದು ಕೆರೂರ, ಅಜೀಜ್ ಪಟೇಲ್, ಹಬೀಬ್ ಜಮಾದಾರ್, ಗುರುನಾಥ ಸಾಹು ಸೇರಿದಂತೆ ಹಲವರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.






