ಜೇವರ್ಗಿ | ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಣವೇ ಪ್ರಮುಖ ಸಾಧನ: ಅಂಜುಂ ತಬಸ್ಸುಮ್

ಜೇವರ್ಗಿ: ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅವರು ಕಂಡ ಕನಸಿನ ಭಾರತವನ್ನು ಸದೃಢವಾಗಿ ನಿರ್ಮಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ ಎಂದು ತಾಲೂಕು ದಂಡಾಧಿಕಾರಿ ಅಂಜುಂ ತಬಸ್ಸುಮ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸುಲಭವಾಗಿ ದೊರೆತಿಲ್ಲ. ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ತ್ಯಾಗ ಮತ್ತು ಹೋರಾಟದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಅಸಮಾನತೆ, ಜಾತೀಯತೆ, ಕಂದಾಚಾರ, ಅನಕ್ಷರತೆ ಹಾಗೂ ಬಡತನದಂತಹ ಸಮಸ್ಯೆಗಳು ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ವಿಷಾದನೀಯ. ಇಂತಹ ಸಾಮಾಜಿಕ ಸವಾಲುಗಳನ್ನು ನಿವಾರಿಸಿ ಸಮಾನತೆ ಹಾಗೂ ಸೌಹಾರ್ದತೆಯಿಂದ ಕೂಡಿದ ಸಮಾಜ ನಿರ್ಮಿಸಬೇಕಿದೆ ಎಂದು ಹೇಳಿದರು.
ಸದೃಢ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣವು ವ್ಯಕ್ತಿಯ ಜ್ಞಾನ ಮತ್ತು ಚಿಂತನೆಯ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಸಮಾಜದಲ್ಲಿ ಪರಿವರ್ತನೆ ತರಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವುದರ ಜೊತೆಗೆ ದೇಶದ ಏಕತೆ, ಅಖಂಡತೆ ಹಾಗೂ ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಅಂಜುಂ ತಬಸ್ಸುಮ್ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ರವಿಚಂದ್ರ ರೆಡ್ಡಿ, ಸಿಪಿಐ ಬಾಪುಗೌಡ ಪಾಟೀಲ, ಬಿಇಒ ವೀರಣ್ಣ ಭೊಮ್ಮನಹಳ್ಳಿ, ಸತೀಶಕುಮಾರ ಸಂಗನ, ಶಂಭುಲಿಂಗ ದೇಸಾಯಿ, ಪ್ರತಾಪ್ ಕಟ್ಟಿ, ದಾನಪ್ಪಗೌಡ ಹಳಿಮನಿ, ಡಾ. ಉಮೇಶ್ ಶರ್ಮಾ, ಶೋಭಾ ಸಜ್ಜನ್, ಸುಮಂಗಲಾ ಹೂಗಾರ, ಹುಲಿಕಂಠರಾಯ ಸುಂಬಡ, ಪಿಎಸ್‌ಐ ಗಜಾನಂದ ಬಿರಾದಾರ, ರೇವಣಸಿದ್ದಪ್ಪ ಹೂಗಾರ, ಗೌಡಪ್ಪಗೌಡ, ಸಂತೋಷ ಸಂಗಮ, ಬಸವರಾಜ ತೇಲ್ಕರ್, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ರವಿಚಂದ್ರ ಗುತೇದಾರ, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಪ್ರವೀಣ ಧನಕರ್, ಮನಿತಾ ಹೊಸಮನಿ, ಮಹೇಶ್ ಕೆಂಬಾವಿ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.






