ಜೇವರ್ಗಿ | ಹಾಲಗಡ್ಲಾ ಕೆರೆಗೆ ನೀರು ಹರಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಜೇವರ್ಗಿ: ಬರಗಾಲದಿಂದ ತಾಲೂಕಿನ ಹಾಲಗಡ್ಲಾ ಕೆರೆ ಬತ್ತುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಕೆರೆಗೆ ಕೂಡಲೇ ನೀರು ತುಂಬಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಹೋರಾಟಗಾರರು ಶನಿವಾರದಿಂದ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು, ಕೆರೆಗೆ ನೀರು ಹರಿಸುವಲ್ಲಿ ವಿಳಂಬ ಮಾಡುತ್ತಿರುವ ಕೆಬಿಜೆಎನ್‌ಎಲ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದ್ದು, ಹಾಲಗಡ್ಲಾ ಕೆರೆ ಸಂಪೂರ್ಣ ಬತ್ತುವ ಸ್ಥಿತಿ ನಿರ್ಮಾಣವಾಗಿದೆ. ಕಾಲುವೆಗಳಲ್ಲಿ ನೀರು ಇಲ್ಲದ ಕಾರಣ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸಿದರು.
ಕನಿಷ್ಠ ಪ್ರಮಾಣದಲ್ಲಾದರೂ ನೀರು ಹರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಬರಗಾಲದಿಂದ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಾಲಗಡ್ಲಾ ಕೆರೆಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟವೂ ಸುಧಾರಿಸಿ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು ಕೆರೆಗೆ ನೀರು ಹರಿಸುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ತಾಲೂಕಿನ ಶಾಸಕ ಹಾಗೂ ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಂಡು ಹಾಲಗಡ್ಲಾ ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದರು.
ಸತ್ಯಾಗ್ರಹದಲ್ಲಿ ಬಸವರಾಜ ಹಾಲಗಡ್ಲಾ, ಸಂತೋಷ ಪಾಟೀಲ, ಸಕ್ರಪ್ಪಗೌಡ ಹರನೂರು, ಪರ್ವತ್ತರೆಡ್ಡಿ ಪಾಟೀಲ, ಆದರ್ಶ ಹರನೂರು, ನಾಗರಾಜ ಕುಂಬಾರ, ಸುಭಾಷ ಕವಲ್ದಾರ್, ಶರಣಪ್ಪ ಠಣಕೇದಾರ, ರಮೇಶ್ ಬಡಿಗೇರ್, ಹಣಮಂತ ಐನಾಪೂರ, ಸಂಗಪ್ಪ ಹಾಲಗಡ್ಲಾ, ಸಾಬಣ್ಣ ಕಾಡಮಗೇರಿ, ಶಿವರಾಜ, ನಿಂಗಪ್ಪ ಪೂಜಾರಿ, ಸಕ್ಕಪ್ಪ ಹರನೂರು, ತಿಮ್ಮಯ್ಯ ಹರನೂರು, ಸೋಮಣ್ಣಗೌಡ ಮಾಲೀಪಾಟೀಲ, ನಾನಾಗೌಡ ಮಾಲೀಪಾಟೀಲ, ಶಶಿಕಾಂತ ಕವಲ್ದಾರ್ ಸೇರಿದಂತೆ ಗ್ರಾಮಸ್ಥರು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು.






