ಜೇವರ್ಗಿ | ಎಸ್‌ಟಿ ಪ್ರಮಾಣಪತ್ರ ಪ್ರಕ್ರಿಯೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ತಳವಾರ ಮಹಾಸಭಾ ಆಗ್ರಹ

ಜೇವರ್ಗಿ : ತಳವಾರ ಸಮುದಾಯದ ಅರ್ಹರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರ ನೀಡುವ ಸರ್ಕಾರಿ ಪ್ರಕ್ರಿಯೆಗೆ ಅಡ್ಡಿಪಡಿಸುವವರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಜೇವರ್ಗಿ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುವ ಮಹಾಸಭಾದ ಮುಖಂಡರು, ಸರ್ಕಾರದ ಆದೇಶ ಅಥವಾ ಅಧಿಸೂಚನೆಗೆ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಅವರು ಕಾನೂನುಬದ್ಧ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸಬೇಕು. ಆದರೆ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು ಅಥವಾ ತಳವಾರ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಒತ್ತಡ ಹೇರುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶ್ರವಣಕುಮಾರ್ ಡಿ. ನಾಯಕ (ಇಟೇರಿ) ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಳವಾರ ಸಮುದಾಯದವರನ್ನು “ನಕಲಿ ತಳವಾರರು” ಎಂದು ಅವಹೇಳನ ಮಾಡುವ ಹೇಳಿಕೆಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜೊತೆಗೆ ಜೇವರ್ಗಿ ಗ್ರೇಡ್–2 ತಹಶೀಲ್ದಾರ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನೈಜ ತಳವಾರ ಸಮುದಾಯದ ಅರ್ಹರಿಗೆ ಸ್ಥಳೀಯ ಪಂಚನಾಮೆ ವರದಿ ಹಾಗೂ ಶಾಲಾ ದಾಖಲಾತಿಗಳನ್ನು ಪರಿಗಣಿಸಿ ನಿಗದಿತ ಕಾಲಮಿತಿಯೊಳಗೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಅರ್ಹರಿಗೆ ಪ್ರಮಾಣಪತ್ರ ನೀಡುವ ಸರ್ಕಾರಿ ಪ್ರಕ್ರಿಯೆಗೆ ಅನಧಿಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಮಹಾಸಭಾ ತಾಲೂಕು ಅಧ್ಯಕ್ಷ ಗಿರೀಶ್ ತುಂಬಗಿ, ಮೈಲಾರಿ ಗುಡೂರ, ಭೀಮರಾಯ ಜನಿವಾರ, ರಾಜೇಂದ್ರ ರಾಜವಾಳ, ಭಾಗೇಶ್ ಹೊತಿನ್ಮಡು, ಬಸು ತಳವಾರ, ಮರೆಪ್ಪ ತಳವಾರ, ರೇವಣಸಿದ್ದ ಕಮಾನಮಣಿ, ರಾಜು ತಳವಾರ ಸೇರಿದಂತೆ ತಳವಾರ ಸಮುದಾಯದ ಮುಖಂಡರು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.






